ವಿರೋಧಿಗಳ ಭದ್ರತೆಗೆ ಯೋಗಿ ಕತ್ತರಿ: ಕಟಿಯಾರ್‌ಗೆ ಝೆಡ್ ಭದ್ರತೆ

Update: 2017-04-23 08:10 GMT

ಲಕ್ನೋ, ಎ.23: ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ವಿರೋಧ ಪಕ್ಷಗಳ ಮುಖಂಡರಿಗೆ ನೀಡಿದ್ದ ಭದ್ರತೆಯನ್ನು ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ದಿಢೀರನೇ ಮೊಟಕುಗೊಳಿಸಿದೆ.

ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್, ಮಾಯಾವತಿ, ಸಂಸದರಾದ ಡಿಂಪಲ್ ಯಾದವ್, ರಾಮ್‌ಗೋಪಾಲ್ ಯಾದವ್, ಸಮಾಜವಾದಿ ಪಕ್ಷದ ಮುಖಂಡರಾದ ಶಿವಪಾಲ್ ಯಾದವ್ ಹಾಗೂ ಅಝಂ ಖಾನ್ ಅವರ ಭದ್ರತೆಯನ್ನೂ ಕಡಿಮೆ ಮಾಡಲಾಗಿದೆ. ಆದರೆ ಬಿಜೆಪಿ ಮುಖಂಡ ವಿನಯ ಕಟಿಯಾರ್ ಸೇರಿದಂತೆ ಕೆಲ ಬಿಜೆಪಿ ಮುಖಂಡರ ಭದ್ರತೆ ಹೆಚ್ಚಿಸಲಾಗಿದೆ. ಕಟಿಯಾರ್ ಇದೀಗ ಝೆಡ್ ಭದ್ರತೆ ಪಡೆಯಲಿದ್ದಾರೆ.

ರಾಜ್ಯದ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಗುಪ್ತಚರ ವಿಭಾಗದ ಎಡಿಜಿ, ಭದ್ರತಾ ವಿಭಾಗದ ಎಡಿಜಿ, ನೂತನ ಡಿಜಿಪಿ ಸುಲ್ಖನ್ ಸಿಂಗ್ ಅವರ ಜತೆ ನಡೆಸಿದ ಸಭೆ ಬಳಿಕ ಶನಿವಾರ ರಾತ್ರಿ ಈ ನಿರ್ಧಾರ ಪ್ರಕಟಿಸಲಾಗಿದ್ದು, ತಕ್ಷಣದಿಂದ ಇದು ಜಾರಿಗೆ ಬಂದಿದೆ. 151 ಮಂದಿಗೆ ರಾಜ್ಯದಲ್ಲಿ ಅತಿಗಣ್ಯರ ಶ್ರೇಣಿಯ ಭದ್ರತೆ ನೀಡಲಾಗುತ್ತಿದ್ದು, ಈ ಪೈಕಿ 105 ಮಂದಿಯ ಭದ್ರತೆಯನ್ನು ಸಂಪೂರ್ಣವಾಗಿ ವಾಪಾಸ್ ಪಡೆಯಲಾಗಿದೆ. 46 ಗಣ್ಯರ ಭದ್ರತೆ ಕಡಿಮೆ ಮಾಡಲಾಗಿದೆ. ಸಂಪೂರ್ಣ ಭದ್ರತಾ ಸೌಲಭ್ಯದಿಂದ ವಂಚಿತರಾದವರಲ್ಲಿ ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಸತೀಶ್ ಚಂದ್ರ ಮಿಶ್ರಾ ಸೇರಿದ್ದಾರೆ.

ಮಿಶ್ರಾ, ಕೇಂದ್ರ ಹಾಗೂ ರಾಜ್ಯದಿಂದ ಭದ್ರತೆ ಪಡೆಯುತ್ತಿದ್ದರು. ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಅಲೋಕ್ ರಂಜನ್ ಕೂಡಾ ಸೌಲಭ್ಯವಂಚಿತರಲ್ಲಿ ಸೇರಿದ್ದಾರೆ. ಇಬ್ಬರು ಎಸ್ಪಿ ಶಾಸಕರಾದ ಆಶು ಮಲಿಕ್ ಹಾಗೂ ಅತುಲ್ ಪ್ರಧಾನ್ ಕೂಡಾ ಈ ವರ್ಗದಲ್ಲಿದ್ದಾರೆ.

ಇತ್ತೀಚೆಗೆ ಸಭೆಯೊಂದರಲ್ಲಿ ಮಾತನಾಡಿದ ಆದಿತ್ಯನಾಥ್, ಭದ್ರತಾ ಸವಲತ್ತು ಪಡೆಯುತ್ತಿರುವ ಗಣ್ಯರು ಭಾಗಶಃ ತ್ಯಾಗಕ್ಕೆ ಮುಂದಾಗಬೇಕು. ಈ ಭದ್ರತೆ ಜನಸಾಮಾನ್ಯರಿಗೆ ಸಿಗುವ ಸಲುವಾಗಿ ಅವರನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News