ಲಾಕಪ್‌ನಲ್ಲಿದ್ದ ಐವರನ್ನು ಬಿಡಿಸಲು ಪೊಲೀಸ್ ಠಾಣೆಗೆ ಬಜರಂಗಿಗಳ ದಾಳಿ, 14 ಜನರ ಸೆರೆ

Update: 2017-04-23 16:47 GMT

ಆಗ್ರಾ, ಎ.23: ತಮ್ಮ ಐವರು ‘ಸಹ ಕಾರ್ಯಕರ್ತರನ್ನು ’ರಕ್ಷಿಸುವ ಪ್ರಯತ್ನವಾಗಿ ಬಜರಂಗ ದಳದ ಕಾರ್ಯಕರ್ತರು ನಿನ್ನೆ ತಡರಾತ್ರಿ ಆಗ್ರಾದ ಫತೇಪುರ ಸಿಕ್ರಿಯ ಸದರ್ ಬಝಾರ್ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ವಾಹನವೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ದಾಳಿಕೋರರೊಂದಿಗಿನ ಘರ್ಷಣೆಯಲ್ಲಿ ಓರ್ವ ಪೊಲೀಸ್ ಗಾಯಗೊಂಡಿದ್ದಾನೆ.

ಶನಿವಾರ ಬೆಳಿಗ್ಗೆ ಪೊಲೀಸರೊಂದಿಗೆ ಘರ್ಷಣೆಗಿಳಿದಿದ್ದ ಐವರು ಬಜರಂಗಿಗಳನ್ನು ಸದರ್ ಬಝಾರ್ ಪೊಲೀಸರು ವಶಕ್ಕೆ ತೆಗೆದುಕೊಂಡು ಲಾಕಪ್‌ನಲ್ಲಿ ಕೂಡಿಟ್ಟಿದ್ದರು.

ಇದನ್ನು ವಿರೋಧಿಸಿ ಫತೇಪುರ ಸಿಕ್ರಿಯ ಬಿಜೆಪಿ ಶಾಸಕ ಉದಯಭಾನ್ ಸಿಂಗ್ ನೇತೃತ್ವದಲ್ಲಿ ಠಾಣೆಗೆ ಮುತ್ತಿಗೆ ಹಾಕಿದ್ದ ಪ್ರತಿಭಟನಾಕಾರರು ಬಜರಂಗ ದಳ ಮತ್ತು ವಿಹಿಂಪ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಹಲ್ಲೆ ಪ್ರಕರಣವನು ಹಿಂದೆಗೆದುಕೊಳ್ಳಬೇಕು ಎಂದು ಪಟ್ಟು ಹಿಡಿದಿದ್ದರಲ್ಲದೆ,ಕೆಲವು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ್ದರು.

ಆದರೆ ಶಾಸಕರು ಅಲ್ಲಿಂದ ಮರಳಿದಾಗ ಬಜರಂಗಿಗಳು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಹಿಂಸಾಚಾರದ ಆರೋಪದಲ್ಲಿ 14 ಜನರನ್ನು ಬಂಧಿಸಲಾಗಿದೆ ಎಂದು ಡಿಐಜಿ ಮಹೇಶ ಮಿಶ್ರಾ ತಿಳಿಸಿದರು.

ಆರಂಭಗೊಂಡಿದ್ದು ಹೇಗೆ?

ಶನಿವಾರ ಬೆಳಿಗ್ಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ಕೆಲವರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಬಜರಂಗ ದಳ ಮತ್ತು ವಿಹಿಂಪಗೆ ಸೇರಿದ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರು ಕೆಲವರನ್ನು ವಶಕ್ಕೆ ತೆಗೆದುಕೊಂಡು ಲಾಕಪ್‌ಗೆ ತಳ್ಳಿದ್ದರು. ಈ ಸುದ್ದಿ ಹರಡುತ್ತಿದ್ದಂತೆ ಬಜರಂಗ ದಳ ಮತ್ತು ವಿಹಿಂಪ ಕಾರ್ಯಕರ್ತರು ಫತೇಪುರ ಸಿಕ್ರಿ ಠಾಣೆಗೆ ತೆರಳಿದ್ದರು. ಅಲ್ಲಿ ಸರ್ಕಲ್ ಆಫೀಸರ್ ರವಿಕಾಂತ ಪರಾಶರ್ ಅವರೊಂದಿಗೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಪರಿಸ್ಥಿತಿ ಹದಗೆಟ್ಟಾಗ ವಿಹಿಂಪ ನಾಯಕ ಜಗಮೋಹನ್ ಚಹಾರ್ ಪರಾಶರ್‌ಗೆ ಕಪಾಳ ಮೋಕ್ಷ ಮಾಡಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.

ಬಳಿಕ ಗುಂಪೊಂದು ಠಾಣೆಗೆ ಮುತ್ತಿಗೆ ಹಾಕಿ ಕಲ್ಲುತೂರಾಟ ನಡೆಸಿತ್ತು. ಪೊಲೀಸರೂ ಕಲ್ಲು ತೂರಾಟ ನಡೆಸಿದ್ದು, ಸುಮಾರು ಅರ್ಧ ಗಂಟೆ ಕಾಲ ಕಾಳಗ ಮುಂದುವರಿದಿತ್ತು. ಎರಡೂ ಕಡೆಗಳ ಜನರು ಗಾಯಗೊಂಡಿದ್ದರು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಇನ್ನೂ ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದ ಫತೇಪುರ ಸಿಕ್ರಿ ಪೊಲೀಸರು ಈ ಪೈಕಿ ಐವರನ್ನು ಸದರ್ ಬಝಾರ್ ಠಾಣೆಗೆ ರವಾನಿಸಿದ್ದರು. ಶನಿವಾರ ತಡರಾತ್ರಿ ಬಜರಂಗಿಗಳು ಅಲ್ಲಿಗೆ ದಾಳಿ ನಡೆಸಿದ್ದಾರೆ.

ಉದಯಭಾನ್ ಸಿಂಗ್ ಸೇರಿದಂತೆ ಸ್ಥಳೀಯ ನಾಯಕರು ಬಂಧಿತರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದರು. ಆದರೆ ಪೊಲೀಸರು ಮಣಿದಿರಲಿಲ್ಲ. ಜನರು ಹೆಚ್ಚೆಚ್ಚು ಸೇರತೊಡಗಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಕಲ್ಲು ತೂರಾಟ ಅರಂಭಿಸಿದ್ದರು. ವಾಹನವೊಂದಕ್ಕೆ ಬೆಂಕಿ ಹಚ್ಚಲಾಗಿದ್ದು ,ಸಿಬ್ಬಂದಿಯೋರ್ವರ ಸರ್ವಿಸ್ ರಿವಾಲ್ವರ್‌ನ್ನೂ ಕಿತ್ತುಕೊಳ್ಳಲಾಗಿತ್ತು.

ಆಗ್ರಾದ ಹಲವಾರು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಸಹಜಗೊಳಿಸಲು ಪ್ರಯತ್ನಿಸಿದ್ದರು. ಪ್ರತಿಭಟನಾಕಾರರು ಬಂಧಿತರ ಬಿಡುಗಡೆಗೆ ಪಟ್ಟು ಹಿಡಿದಿದ್ದರಿಂದ ಮಾತುಕತೆಗಳು ವಿಫಲಗೊಂಡಿದ್ದವು.ಬಂಧಿತರಲ್ಲಿ ಬೆಳಿಗ್ಗೆ ಪೊಲೀಸ್ ಅಧಿಕಾರಿಗೆ ಕಪಾಳ ಮೋಕ್ಷ ಮಾಡಿದ್ದ ಚಹರ್ ಕೂಡ ಸೇರಿದ್ದಾನೆ.

ಸದರ್ ಬಝಾರ್ ಠಾಣೆಗೆ ದಾಳಿ ನಡೆಸಿದ್ದ ಬಜರಂಗಿಗಳು ಲಾಕಪ್ ಮುರಿಯಲೂ ಯತ್ನಿಸಿದ್ದರು ಎಂದು ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News