ಮುಂಬೈಗೆ ಪುಣೆಯ ಸವಾಲು

Update: 2017-04-23 17:26 GMT

ಮುಂಬೈ, ಎ.23: ಇಲ್ಲಿನ ವಾಂಖೆಡೆ ಸ್ಟೇಡಿಯನಲ್ಲಿ ಸೋಮವಾರ ನಡೆಯಲಿರುವ ಐಪಿಎಲ್‌ನ 28ನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ನ ಸವಾಲು ಎದುರಾಗಲಿದೆ.

ಉಭಯ ತಂಡಗಳು ಕಳೆದ ಪಂದ್ಯದಲ್ಲಿ ಜಯ ಗಳಿಸಿತ್ತು. ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಪುಣೆ , ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯ ಗಳಿಸಿತ್ತು.

ರಾಹುಲ್ ತ್ರಿಪಾಠಿ ಅವರ ಚೊಚ್ಚಲ ಅರ್ಧಶತಕ (59) ಮತ್ತು ಮಹೇಂದ್ರ ಸಿಂಗ್ ಔಟಾಗದೆ 61 ರನ್ ಗಳಿಸಿ ಪುಣೆಗೆ 177 ರನ್‌ಗಳ ಗೆಲುವಿನ ಸಾಲನ್ನು ಪೂರೈಸಲು ನೆರವಾಗಿದ್ದರು.

ಸತತ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಪುಣೆ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಕೊನೆಯ ಸ್ಥಾನದಲ್ಲಿದ್ದ ಪುಣೆ ನಾಲ್ಕನೆ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಮುಂಬೈ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 8 ವಿಕೆಟ್ ನಷ್ಟದಲ್ಲಿ 142 ರನ್ ಗಳಿಸಿತ್ತು. ಡೆಲ್ಲಿಗೆ ಸವಾಲು ಅಷ್ಟೇನೂ ಕಠಿಣವಾಗಿರದಿದ್ದರೂ, ಮುಂಬೈ ತಂಡದ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಮಿಚೆಲ್ ಮೆಕ್ಲೀನಘನ್, ಮಿಚೆಲ್ ಜಾನ್ಸನ್, ಜಸ್‌ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ದಾಳಿ ಮತ್ತು ಉತ್ತಮ ಕ್ಷೇತ್ರ ರಕ್ಷಣೆಯ ಫಲವಾಗಿ ಒಂದು ಹಂತದಲ್ಲಿ ದಿಲ್ಲಿ 24 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು.

 ರಬಾಡ ಮತ್ತು ಮೊರಿಸ್ 7ನೆ ವಿಕೆಟ್‌ಗೆ 91 ರನ್‌ಗಳ ಜೊತೆಯಾಟ ನೀಡಿ ಹೋರಾಟ ನಡೆಸಿದ್ದರೂ, ತಂಡ ಗೆಲುವಿನಂಚಿನಲ್ಲಿ ಎಡವಿತ್ತು. ಮುಂಬೈ ಮೊದಲ ಪಂದ್ಯಲ್ಲಿ ಪುಣೆ ವಿರುದ್ಧ ಸೋಲು ಅನುಭವಿಸಿತ್ತು. ಬಳಿಕ 6 ಪಂದ್ಯಗಳಲ್ಲಿ ಸತತ ಜಯ ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಮುಂಬೈಗೆ ಮತ್ತೊಮ್ಮೆ ಸೋಲುಣಿಸಲು ಪುಣೆ ನೋಡುತ್ತಿದೆ. ಆದರೆ ಮುಂಬೈ ಸೇಡು ತೀರಿಸಲು ನೋಡುತ್ತಿದೆ.

 ಪುಣೆ ಇದೇ ಕ್ರೀಡಾಂಗಣದಲ್ಲಿ ಕಳೆದ ಆವೃತ್ತಿಯಲ್ಲಿ ಚೊಚ್ಚಲ ಪ್ರವೇಶ ಪಡೆದು ಸ್ಥಳೀಯ ಹುಡುಗ ಅಜಿಂಕ್ಯ ರಹಾನೆ ಔಟಾಗದೆ ದಾಖಲಿಸಿದ 66 ರನ್‌ಗಳ ಸಹಾಯದಿಂದ 9 ವಿಕೆಟ್‌ಗಳ ಜಯ ಗಳಿಸಿತ್ತು. ರಹಾನೆ ಮುಂಬೈ ವಿರುದ್ಧ ಕಳೆದ ಪಂದ್ಯದಲ್ಲೂ 60 ರನ್ ಗಳಿಸಿ 186 ರನ್‌ಳ ಗೆಲುವಿನ ಸವಾಲನ್ನು ಬೆನ್ನಟ್ಟಲು ಪುಣೆಗೆ ನೆರವಾಗಿದ್ದರು. ರಹಾನೆ ಔಟಾದ ಬಳಿಕ ನಾಯಕ ಸ್ಮಿತ್ ಔಟಾಗದೆ 84 ರನ್‌ಗಳ ನೆರವು ನೀಡಿದ್ದರು. ನಾಲ್ಕನೆ ವಿಕೆಟ್‌ಗೆ ಧೋನಿ ಮತ್ತು ಸ್ಮಿತ್ ಮುರಿಯದ ಜೊತೆಯಾಟದಲ್ಲಿ 4.3 ಓವರ್‌ಗಳಲ್ಲಿ 44 ರನ್‌ಗಳ ಕೊಡುಗೆ ನೀಡಿದ್ದರು.

ಹೆಡ್-ಟು-ಹೆಡ್ ದಾಖಲೆ
ಮುಖಾಮುಖಿ: 3
ಗೆಲುವು: ಮುಂಬೈಗೆ 1, ಪುಣೆ 2
ವಾಂಖೆಡೆಯಲ್ಲಿ ಮುಖಾಮುಖಿ-1
ಜಯ : ಪುಣೆ 1, ಮುಂಬೈ 0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News