ದ.ಕ.: ಶೀಘ್ರವೇ 11 ಗ್ರಾಮಗಳಲ್ಲಿ ಸಾವಯವ ಉತ್ಪನ್ನಗಳ ಔಟ್ ಲೆಟ್

Update: 2017-04-23 18:27 GMT

ಮಂಗಳೂರು, ಎ.23: ಸಾವಯವ ಕೃಷಿಗೆ ಒತ್ತು ನೀಡುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಅಧಿಕೃತವಾಗಿ ಕೃಷಿ ಇಲಾಖೆಯಿಂದ ಗುರುತಿಸಿಕೊಂಡಿರುವ ಸಾವಯವ ಕೃಷಿಕರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಔಟ್‌ಲೆಟ್‌ಗಳು(ಮಳಿಗೆಗಳು) ತೆರೆದುಕೊಳ್ಳಲಿವೆ. ಇದರ ಪ್ರಥಮ ಹಂತವಾಗಿ ಮಂಗಳೂರು ತಾಲೂಕಿನ ಸೂರಿಂಜೆಯ ಸುಭಿಕ್ಷಾ ಸಾವಯವ ಕೃಷಿಕರ ಸಂಘದ ಸದಸ್ಯರು ಬೆಳೆದ ಉತ್ಪನ್ನಗಳಿಗೆ ಸುರತ್ಕಲ್‌ನಲ್ಲಿ 1 ತಿಂಗಳೊಳಗೆ ಮಳಿಗೆ ಆರಂಭಗೊಳ್ಳಲಿದೆ.

ಬಳಿಕ ಮಂಗಳೂರಿನ ಬೋಳಿಯಾರು, ಬಂಟ್ವಾಳದ ರಾಯಿ, ವೀರಕಂಬ, ಪುತ್ತೂರಿನ ಉಪ್ಪಿನಂಗಡಿ, ಕಡಬ, ಅಲಂಗಾರು, ಸುಳ್ಯ ತಾಲೂ ಕಿನ ಸುಳ್ಯ ಹಾಗೂ ಪಂಜ, ಬೆಳ್ತಂಗಡಿ ನಡ ಮತ್ತು ಕುತ್ಲೂರುಗಳಲ್ಲಿ ಸಾವಯವ ಉತ್ಪನ್ನಗಳ ಮಳಿಗೆ ಗಳನ್ನು ತೆರೆಯಲು ಸಿದ್ಧತೆ ನಡೆಯುತ್ತಿವೆ. ಕೃಷಿ ಇಲಾಖೆಯ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲೆಯ 11 ಕ್ಲಸ್ಟರ್‌ಗಳಲ್ಲಿ ಸಾವಯವ ಕೃಷಿ ಪದ್ಧತಿಯಡಿ ರೈತರು ಕೃಷಿ ಉತ್ಪನ್ನಗಳನ್ನು ಬೆಳೆಸುತ್ತಿದ್ದಾರೆ.

ಸಾವಯವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಕೃಷಿ ಇಲಾಖೆಯು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಳೆದ ಮೂರು ವರ್ಷಗಳಿಂದ ಸದ್ದಿಲ್ಲದೆ ಕಾರ್ಯ ಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮದಡಿ ಈಗಾಗಲೇ ಜಿಲ್ಲೆಯ ಒಟ್ಟು 4,200 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಯನ್ನು ಬೆಳೆಸಲಾಗುತ್ತಿದೆ.

3 ವರ್ಷಗಳ ಪರಿಶೀಲನೆ, ಸರ್ಟಿಫಿಕೆಟ್ ಕಡ್ಡಾಯ!

ಗ್ರಾಮಮಟ್ಟದಲ್ಲಿ ಕ್ಲಸ್ಟರ್‌ಗಳ ಮೂಲಕ ಸಾವ ಯವ ಕೃಷಿಯ ಪರಿಶೀಲನೆ ನಡೆಸುವ ಪ್ರಕ್ರಿಯೆ ಕಳೆದ 3ವರ್ಷಗಳಿಂದ ಜಾರಿಯಲ್ಲಿದೆ. ಕೃಷಿಕನೊಬ್ಬ ಸಾವಯವ ಪದ್ಧತಿಯಲ್ಲಿ ಕೃಷಿಯಲ್ಲಿ ತೊಡಗಿಕೊಂಡಿರುವ ಬಗ್ಗೆ ಆತ ಬೆಳೆದ ಉತ್ಪನ್ನಗಳು ಹಾಗೂ ಮಣ್ಣಿನ ಪರೀಕ್ಷೆಯನ್ನು ನಡೆಸಲಾಗುತ್ತದೆ. ರಾಜ್ಯದ ಸಾವಯವ ಕೃಷಿಕರ ಪ್ರಮಾಣ ಸಂಸ್ಥೆಯಿಂದ ಈ ಪರಿಶೀಲನೆ ನಡೆಯುತ್ತದೆ. ಪರಿಶೀಲನೆಯ ಬಳಿಕ ಅರ್ಹ ಕೃಷಿಕರಿಗೆ ಸಾವಯವ ಬೆಳೆಯ ಬಗ್ಗೆ ಅಧಿಕೃತ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣ ಪತ್ರ ಹೊಂದಿದ ಕೃಷಿಕರ ಉತ್ಪನ್ನಗಳನ್ನು ಅಧಿಕೃತ ಸಾವಯವ ಬೆಳೆಗಳು ಎಂದು ತೀರ್ಮಾನಿಸಬಹುದಾಗಿದೆ. ಇಂತಹ ಬೆಳೆಗಾರರು ಗ್ರಾಮ ಮಟ್ಟದಲ್ಲಿ ತಮ್ಮ ಸಂಘಗಳ ಮೂಲಕ ಮಳಿಗೆಗಳನ್ನು ಸ್ಥಾಪಿಸಿ ನೇರವಾಗಿ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಬಹುದಾಗಿದೆ ಎಂದು ದ.ಕ. ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆಂಪೇಗೌಡ ಹೇಳುತ್ತಾರೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಪ್ರಕ್ರಿಯೆಯಡಿ ಜಿಲ್ಲೆಯ 6,420 ಕೃಷಿಕರು ನೋಂದಾಯಿಸಿ ಕೊಂಡಿದ್ದಾರೆ. 2017ರ ಅಂತ್ಯಕ್ಕೆ ಈ ಪ್ರಕ್ರಿಯೆ ಪೂರ್ಣ ಗೊಂಡು ನೋಂದಾಯಿತ ಕೃಷಿಕರಿಗೆ ಪ್ರಮಾಣ ಪತ್ರ ನೀಡಲಾಗುವುದು. ಏಕಾಏಕಿಯಾಗಿ ಯಾವುದೇ ಬೆಳೆಯನ್ನು ಸಾವಯವ ಕೃಷಿಯೆಂದು ನಿರ್ಧರಿಸಲು ಸಾಧ್ಯ ವಾಗುವುದಿಲ್ಲ. ಅದಕ್ಕಾಗಿ ಕನಿಷ್ಠ 3ರಿಂದ 5 ವರ್ಷಗಳು ಅಗತ್ಯ. ಈ ಅವಧಿಯಲ್ಲಿ ಕೃಷಿ ತಜ್ಞರು ಕ್ಷೇತ್ರ ಭೇಟಿ ನೀಡಿ ಮಣ್ಣಿನ ಪರೀಕ್ಷೆ, ಉಪಯೋಗಿಸುವ ಗೊಬ್ಬರ, ಉತ್ಪತ್ತಿ ಯಾದ ಬೆಳೆಗಳನ್ನು ಪರಿಶೀಲಿಸುತ್ತಾರೆ. ಮಾತ್ರ ವಲ್ಲದೆ ಕೃಷಿ ಇಲಾಖೆಯು ನೀಡುವ ಮಾರ್ಗ ದರ್ಶನಗಳನ್ನು ಅನುಸರಿಸಬೇಕು. ಆ ಬಳಿಕವೇ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಅದಕ್ಕಾಗಿ ಈಗಾಗಲೇ ಸಾವಯವ ಕೃಷಿಯನ್ನು ಅನುಸರಿಸುತ್ತಿರುವ ಕೃಷಿಕರು ಕೂಡಾ ಕೃಷಿ ಇಲಾಖೆಯ ಜತೆ ನೋಂದಾಯಿಸಿಕೊಂಡು ತಮ್ಮ ಬೆಳೆಗಳನ್ನು ಅಧಿಕೃತ ಸಾವಯವ ಕೃಷಿಯನ್ನಾಗಿ ಘೋಷಿಸಿಕೊಳ್ಳಲು ಅವಕಾಶವಿದೆ. ಇದಕ್ಕೆ ಕೃಷಿಕರ ಸಹಕಾರ ಅಗತ್ಯ ಎಂದು ಅವರು ಹೇಳುತ್ತಾರೆ. ದ.ಕ. ಜಿಲ್ಲೆಯ ಸಾವಯವ ಅಕ್ಕಿಯ ಜತೆಗೆ ಮೆಣಸಿಗೆ ರಾಷ್ಟ್ರಮಟ್ಟದಲ್ಲಿ ಆದ್ಯತೆ ದೊರೆತಾಗ ಗ್ರಾಹಕರಿಗೆ ನಿಗದಿತ ದರದಲ್ಲಿ ಸಾವಯವ ಉತ್ಪನ್ನಗಳು ಲಭ್ಯವಾಗಲಿವೆ ಎಂದು ಡಾ. ಕೆಂಪೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಎಂಎಫ್ ಮಾದರಿಯಲ್ಲಿ ಒಕ್ಕೂಟ ರಚನೆಯ ಚಿಂತನೆ

 ಪ್ರಸ್ತುತ ಸಾವಯವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ, ಮಧ್ಯವರ್ತಿಗಳಿಂದಾಗಿ ಸೂಕ್ತ ಬೆಲೆಯನ್ನು ಪಡೆಯಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾವಯವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ರಾಜ್ಯಮಟ್ಟದ ಸಾವಯವ ಕೃಷಿಗೆ ಉನ್ನತ ಮಟ್ಟದ ಸಮಿತಿ ರಚನೆಯಾಗಿದೆ. ಈ ಸಮಿತಿಯಡಿ ಪ್ರಸ್ತುತ 14 ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ಸೋಮಶೇಖರ್ ಅಧ್ಯ ಕ್ಷತೆಯಲ್ಲಿ ಈ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಒಕ್ಕೂಟಗಳ ಮೂಲಕವೇ ಆಯಾ ಪ್ರದೇಶಗಳಲ್ಲಿ ಬೆಳೆದ ಸಾವಯವ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಿ ಸೂಕ್ತ ಮಾರುಕಟ್ಟೆ ಒದಗಿಸುವ ಮೂಲಕ ಕೃಷಿಕರ ಜೊತೆಗೆ ಗ್ರಾಹಕರಿಗೂ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಕೆಎಂಎಫ್ ಮಾದರಿಯಲ್ಲಿ ಒಕ್ಕೂಟ ರಚನೆಯ ಚಿಂತನೆಯೂ ಇದೆ ಎಂದು ಡಾ. ಕೆಂಪೇಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News