ವ್ಯರ್ಥವಾಗುತ್ತಿದೆ ದಾನಿಗಳ ಲಕ್ಷಗಟ್ಟಲೆ ಯುನಿಟ್ ರಕ್ತ

Update: 2017-04-24 03:46 GMT

ಮುಂಬೈ, ಎ.24: ರಕ್ತ ಅಮೂಲ್ಯ. ಒಂದು ಯುನಿಟ್ ರಕ್ತ ದಾನ ಮಾಡಿದರೆ ಒಂದು ಜೀವ ಉಳಿಸಬಹುದು ಎಂಬ ಪ್ರಚಾರ ವ್ಯಾಪಕವಾಗಿದೆ. ಆದರೆ ದೇಶದಲ್ಲಿ ರಕ್ತ ಬ್ಯಾಂಕ್‌ಗಳು ಮತ್ತು ಆಸ್ಪತ್ರೆಗಳ ನಡುವೆ ಸಮನ್ವಯ ಇಲ್ಲದೇ, ರಕ್ತ ಬ್ಯಾಂಕ್‌ಗಳ ಜಾಲದ ಕೊರತೆಯಿಂದ ಕಳೆದ ಐದು ವರ್ಷಗಳಲ್ಲಿ 28 ಲಕ್ಷ ಯುನಿಟ್ ಅಂದರೆ 6 ಲಕ್ಷ ಲೀಟರ್ ರಕ್ತ ವ್ಯರ್ಥವಾಗಿದೆ.

ದಾನಿಗಳಿಂದ ಪಡೆದ ರಕ್ತದಲ್ಲಿ ಶೇಕಡ 6ರಷ್ಟು ರಕ್ತ ಹೀಗೆ ವ್ಯರ್ಥವಾಗಿದೆ. ಭಾರತದಲ್ಲಿ ಪ್ರತೀ ವರ್ಷ ಕನಿಷ್ಠ 30 ಲಕ್ಷ ಯುನಿಟ್ ರಕ್ತದ ಕೊರತೆ ಇದೆ. ರಕ್ತದ ಕೊರತೆ, ಪ್ಲಾಸ್ಮಾ ಅಥವಾ ಪ್ಲೇಟ್ಲೆಟ್ ಕೊರತೆಯಿಂದಾಗಿ ಹೆರಿಗೆ ಸಂದರ್ಭದ ಸಾವು, ಅಪಘಾತದಲ್ಲಿ ಗಾಯಗೊಂಡವರ ಸಾವು ಗಣನೀಯ ಪ್ರಮಾಣದಲ್ಲಿ ಆಗುತ್ತಿದೆ.

ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ತ ವ್ಯರ್ಥವಾಗಿದೆ. ಇಲ್ಲಿ ರಕ್ತ ವ್ಯರ್ಥವಾಗಿರುವುದು ಮಾತ್ರವಲ್ಲದೇ, ಜೀವರಕ್ಷಕ ಅಂಶಗಳಾದ ಕೆಂಪು ರಕ್ತಕಣ ಹಾಗೂ ಪ್ಲಾಸ್ಮಾಗಳನ್ನು ಕೂಡಾ ಅವಧಿ ಮೀರುವ ಮುನ್ನ ಬಳಕೆ ಮಾಡಿಕೊಳ್ಳದೇ ಅಮೂಲ್ಯ ರಕ್ತ ಹಾಗೂ ರಕ್ತದ ಅಂಶಗಳನ್ನು ಹಾಳುಗೆಡವಲಾಗಿದೆ. 2016-17 ವರ್ಷದಲ್ಲೇ 6.57 ಲಕ್ಷ ಯುನಿಟ್ ರಕ್ತ ವ್ಯರ್ಥವಾಗಿದೆ. ಒಂದು ವರ್ಷ ಬಾಳಿಕೆ ಅವಧಿ ಇರುವ ಶೇಕಡ 50ರಷ್ಟು ಪ್ಲಾಸ್ಮಾ ಕೂಡಾ ನಿಷ್ಪ್ರಯೋಜಕವಾಗಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ, ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಿಂದ ಈ ಅಂಕಿ ಅಂಶ ಬಹಿರಂಗವಾಗಿದೆ.

ರಕ್ತಕಣ ವ್ಯರ್ಥ ಮಾಡಿದ ದೇಶದ ಅಗ್ರ ಮೂರು ರಾಜ್ಯಗಳೆಂದರೆ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕ. ಮಹಾರಾಷ್ಟ್ರದಲ್ಲಿ 10 ಲಕ್ಷ ಯುನಿಟ್ ರಕ್ತ ಸಂಗ್ರಹಿಸಲಾಗಿದ್ದು, ಇದನ್ನು ವ್ಯರ್ಥಪಡಿಸಿರುವಲ್ಲೂ ಆ ರಾಜ್ಯಕ್ಕೆ ಅಗ್ರಸ್ಥಾನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News