ರಾಜ್ ಕುಮಾರ್ 88ನೇ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಗೌರವ

Update: 2017-04-24 05:01 GMT

ಹೊಸದಿಲ್ಲಿ, ಎ.24: ಕನ್ನಡ ಚಿತ್ರರಂಗದ ನಟ ಸಾರ್ವಭೌಮ, ಅಭಿಮಾನಿಗಳ ಪ್ರೀತಿಯ 'ಅಣ್ಣಾವ್ರು' ಅವರ 88ನ ಜನ್ಮದಿನ ಇಂದು. ಎಪ್ರಿಲ್ 24, 1929ರಲ್ಲಿ ಹುಟ್ಟಿದ್ದ ರಾಜ್ ಅವರ ಮೂಲ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು. ಇಂದು ಬದುಕಿದ್ದಿದ್ದರೆ ಅವರಿಗೆ 88 ತುಂಬುತ್ತಿತ್ತು. ಅವರೀಗ ನಮ್ಮೊಂದಿಗಿಲ್ಲ ನಿಜ. ಆದರೆ, ಅವರ ನೆನಪು ಅಭಿಮಾನಿಗಳ ಮನದಲ್ಲಿ ಹಚ್ಚಹಸುರಾಗಿದೆ. ಇದೀಗ ಗೂಗಲ್ ಕೂಡ ಈ ಮೇರು ನಟನಿಗ ಡೂಡಲ್ ಒಂದರ ಮುಖಾಂತರ ತನ್ನ ನಮನ ಸಲ್ಲಿಸಿದೆ.

ರಾಜಕುಮಾರ್ ಅವರ ಬೃಹತ್ ಚಿತ್ರವೊಂದು ಪರದೆಯ ಮೇಲೆ ಕಾಣುತ್ತಿರುವುದು ಹಾಗೂ ಪ್ರೇಕ್ಷಕರು ತದೇಕಚಿತ್ತದಿಂದ ಅದನ್ನು ನೋಡುತ್ತಿರುವಂತಿರುವ ಕಲಾಕೃತಿಯೊಂದು ಡೂಡಲ್ ರೂಪದಲ್ಲಿ ರಾಜ್ ಅಭಿಮಾನಿಗಳನ್ನು ಹಾಗೂ ಕನ್ನಡಿಗರನ್ನು ಮಂತ್ರಮುಗ್ಧಗೊಳಿಸಿದೆ.

1954ರಿಂದ ಆರಂಭಗೊಂಡು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಈ ಮೇರು ನಟನಿಗೆ ಗೂಗಲ್ ಈ ರೀತಿಯಾಗಿ ದೊಡ್ಡ ಗೌರವವನ್ನು ನೀಡಿದೆ. 1954ರಲ್ಲಿ ಬೇಡರ ಕಣ್ಣಪ್ಪದಿಂದ ಆರಂಭವಾದ ಅವರ ಚಿತ್ರ ಜೀವನ 2000ರಲ್ಲಿ ಶಬ್ದವೇಧಿಯೊಂದಿಗೆ ಅಂತ್ಯವಾಗಿತ್ತು.

1983ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ಡಾ.ರಾಜ್ ಮೂರು ರಾಷ್ಟ್ರೀಯ ಪ್ರಶಸ್ತಿ (ಅವುಗಳಲ್ಲೊಂದು ಹಿನ್ನೆಲೆ ಗಾಯನಕ್ಕಾಗಿ) ಹಾಗೂ ರಾಜ್ಯ ಚಿತ್ರ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ, ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು.

2000ರಲ್ಲಿ ಕಾಡುಗಳ್ಳ ವೀರಪ್ಪನ್ ನಿಂದ ಅಪಹೃತಗೊಂಡಾಗ ಅವರ ಜೀವನದಲ್ಲೂ ಸಿನಿಮೀಯ ಘಟನೆಯೊಂದು ನಡೆದು ಹೋಗಿತ್ತು. ಅಪಹರಣಗೊಂಡು 108 ದಿನಗಳ ನಂತರ ರಾಜ್ ಬಿಡುಗಡೆಯಾಗಿದ್ದರು. ತಮ್ಮ 77ನೆ ವಯಸ್ಸಿನಲ್ಲಿ ಅವರು ಎಪ್ರಿಲ್ 12, 2006ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News