ನಕಲಿ ಪಾಸ್‌ಪೋರ್ಟ್ ಪ್ರಕರಣ: ಛೋಟಾ ರಾಜನ್ ದೋಷಿ; ನ್ಯಾಯಾಲಯದ ತೀರ್ಪು

Update: 2017-04-24 12:41 GMT

 ಹೊಸದಿಲ್ಲಿ, ಎ.24: ನಕಲಿ ಪಾಸ್‌ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವೊಂದು ಪಾತಕಿ ರಾಜೇಂದ್ರ ಸದಾಶಿವ ನಿಖಾಲ್ಜೆ ಅಲಿಯಾಸ್ ಛೋಟಾ ರಾಜನ್ ದೋಷಿ ಎಂದು ತೀರ್ಪಿತ್ತಿದೆ.

 ರಾಜನ್ ಜೊತೆಗೆ ಇತರ ಮೂವರು ಆರೋಪಿಗಳಾದ ಜಯಶ್ರೀ ದತ್ತಾತ್ರೇಯ ರಹಾಟೆ, ದೀಪಕ್ ನಟವರ್‌ಲಾಲ್ ಶಾ ಮತ್ತು ಲಲಿತಾ ಲಕ್ಷ್ಮಣನ್ ಅವರನ್ನೂ ದೋಷಿಗಳೆಂದು ತೀರ್ಪು ನೀಡಿದೆ. ಈ ಮೂವರೂ ಮಾಜಿ ಪಾಸ್‌ಪೋರ್ಟ್ ಅಧಿಕಾರಿಗಳು. ಇವರಿಗೆ ಎಪ್ರಿಲ್ 25ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಂದು ಶಿಕ್ಷೆಯ ಪ್ರಮಾಣದ ಬಗ್ಗೆ ವಾದ-ವಿವಾದ ನಡೆಯಲಿದೆ.

    1998-99ರಲ್ಲಿ ಮೋಹನ್ ಕುಮಾರ್ ಎಂಬ ಹೆಸರಲ್ಲಿ ಛೋಟಾ ರಾಜನ್ ಪಾಸ್‌ಪೋರ್ಟ್ ಪಡೆದಿದ್ದ. ಪಾಸ್‌ಪೋರ್ಟ್ ಅಧಿಕಾರಿಗಳಾದ ರಹಾಟೆ, ಶಾ ಮತ್ತು ಲಕ್ಷ್ಮಣನ್ ಅವರು ರಾಜನ್‌ಗೆ ನೆರವಾಗಿದ್ದರು ಎಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ರಾಜನ್ ವಿರುದ್ಧ ದಿಲ್ಲಿ ಮತ್ತು ಮುಂಬೈಯಲ್ಲಿ ಸುಮಾರು 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಅಪರಾಧ ಸಾಬೀತಾಗಿರುವ ಪ್ರಪ್ರಥಮ ಪ್ರಕರಣ ಇದಾಗಿದೆ. ದೇಶದಿಂದ ಪಲಾಯನ ಮಾಡಿ ಸುಮಾರು 27 ವರ್ಷ ಭೂಗತನಾಗಿದ್ದ ರಾಜನ್‌ನನ್ನು 2015ರ ಅಕ್ಟೋಬರ್ 25ರಂದು ಇಂಡೊನೇಶಿಯಾ ಪೊಲೀಸರು ಬಂಧಿಸಿದ್ದು ನವೆಂಬರ್‌ನಲ್ಲಿ ಭಾರತಕ್ಕೆ ಹಸ್ತಾಂತರ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News