ಕಾಶ್ಮೀರಿಗಳ ಕನಸು ಕಾಣುವ ಅವಕಾಶವನ್ನು ಕಸಿದುಕೊಂಡರೆ ಭಾರತದ ಪ್ರಜಾಸತ್ತೆಗೆ ವಿಶ್ವಾಸಾರ್ಹತೆ ಇಲ್ಲ

Update: 2017-04-24 13:51 GMT

ದಾರ್‌ರನ್ನು ಸೇನಾ ಜೀಪಿಗೆ ಕಟ್ಟಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಆದರೆ, ಅದೇ ವೇಳೆ, ಕಾಶ್ಮೀರದ ಕಲ್ಲೆಸೆಯುವ ಯುವಕರು ಮತ್ತು ಪ್ರತ್ಯೇಕತಾವಾದಿ ಉಗ್ರರು ‘‘ಇಂದು ಬಚಾವಾಗಬಹುದು, ಆದರೆ, ನಾವು ನಾಳೆ ಅವರನ್ನು ಹಿಡಿಯುತ್ತೇವೆ. ನಮ್ಮ ದಣಿವಿರದ ಕಾರ್ಯಾಚರಣೆ ಮುಂದುವರಿಯುತ್ತದೆ’’ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ನ್ಯೂಯಾರ್ಕ್, ಎ. 24: ಭಾರತ ಕಾಶ್ಮೀರದಲ್ಲಿ ನಡೆಸುತ್ತಿರುವ ಭದ್ರತಾ ಕಾರ್ಯಾಚರಣೆ ‘ಅಮಾನುಷವಾಗಿದೆ’ ಎಂದು ‘ನ್ಯೂಯಾರ್ಕ್ ಟೈಮ್ಸ್’ ತನ್ನ ಕಟು ಸಂಪಾದಕೀಯವೊಂದರಲ್ಲಿ ಹೇಳಿದೆ ಹಾಗೂ ಇದು ಹೆಚ್ಚಿನ ಬಂಡಾಯಕ್ಕೆ ಪ್ರಚೋದನೆ ನೀಡುತ್ತದೆ ಎಂದಿದೆ.

ಕಾಶ್ಮೀರದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗದಿರುವುದನ್ನು ಭಾರತ ಸರಕಾರ ಖಾತ್ರಿಪಡಿಸಬೇಕು ಎಂದು ಶನಿವಾರ ಪ್ರಕಟಗೊಂಡ ಸಂಪಾದಕೀಯ ಹೇಳಿದೆ.

ಕಾಶ್ಮೀರದಲ್ಲಿ ಸೇನಾ ವಾಹನವೊಂದಕ್ಕೆ ನಾಗರಿಕನೋರ್ವನನ್ನು ‘ಮಾನವ ಗುರಾಣಿ’ಯನ್ನಾಗಿ ಕಟ್ಟಿ ಸುತ್ತಾಡಿಸಿದ ವೀಡಿಯೊವೊಂದು ಬಹಿರಂಗಗೊಂಡ ದಿನಗಳ ಬಳಿಕ ‘ನ್ಯೂಯಾರ್ಕ್ ಟೈಮ್ಸ್’ನ ಸಂಪಾದಕೀಯ ಮಂಡಳಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಲ್ಲೆಸೆಯುವ ಗುಂಪುಗಳ ವಿರುದ್ಧ ಮಾನವ ಗುರಾಣಿಯನ್ನಾಗಿ 24 ವರ್ಷದ ಫಾರೂಕ್ ಅಹ್ಮದ್ ದಾರ್‌ರನ್ನು ಜೀಪೊಂದರ ಮುಂಭಾಗಕ್ಕೆ ಕಟ್ಟುವ ಮೂಲಕ, ಕಾಶ್ಮೀರದಲ್ಲಿ ನಡೆಯುತ್ತಿದೆಯೆನ್ನಲಾದ ಮಾನವಹಕ್ಕು ಉಲ್ಲಂಘನೆಗಳ ಇತಿಹಾಸದಲ್ಲಿ ಸೇನೆ ಅತ್ಯಂತ ನಿಕೃಷ್ಟ ಸ್ಥಾನಕೆಕ ತಲುಪಿದೆ ಎಂದು ಸಂಪಾದಕೀಯ ಹೇಳಿದೆ.

‘‘ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುತ್ತಿರುವ ವೀಡಿಯೊದ ಮೂಲಕ ಸಾರ್ವಜನಿಕರ ಗಮನಕ್ಕೆ ಬಂದಿರುವ ಘಟನೆಯು, ಕಾಶ್ಮೀರದ ಸುಮಾರು ಮೂರು ದಶಕಗಳ ಬಂಡಾಯದ ನೋಟವೊಂದನ್ನು ಒದಗಿಸುತ್ತದೆ’’ ಎಂದು ‘ಕಾಶ್ಮೀರದಲ್ಲಿನ ಕ್ರೌರ್ಯ ಮತ್ತು ಹೇಡಿತನ’ ಎಂಬ ತಲೆಬರಹದ ಸಂಪಾದಕೀಯ ಹೇಳುತ್ತದೆ.

ದಾರ್‌ರನ್ನು ಸೇನಾ ಜೀಪಿಗೆ ಕಟ್ಟಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಆದರೆ, ಅದೇ ವೇಳೆ, ಕಾಶ್ಮೀರದ ಕಲ್ಲೆಸೆಯುವ ಯುವಕರು ಮತ್ತು ಪ್ರತ್ಯೇಕತಾವಾದಿ ಉಗ್ರರು ‘‘ಇಂದು ಬಚಾವಾಗಬಹುದು, ಆದರೆ, ನಾವು ನಾಳೆ ಅವರನ್ನು ಹಿಡಿಯುತ್ತೇವೆ. ನಮ್ಮ ದಣಿವಿರದ ಕಾರ್ಯಾಚರಣೆ ಮುಂದುವರಿಯುತ್ತದೆ’’ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

‘‘ಇಂಥ ಸವಾಲುಗಳು ಕಾಶ್ಮೀರವನ್ನು ಮತ್ತಷ್ಟು ಹಿಂಸೆಯತ್ತ ಕೊಂಡೊಯ್ಯುತ್ತದೆ. ಅಲ್ಲಿ ಮತ್ತಷ್ಟು ಅಮಾನುಷ ಸೇನಾ ಕಾರ್ಯಾಚರಣೆಗಳು ಮತ್ತಷ್ಟು ನಿರಾಶೆ ಮತ್ತು ಹೆಚ್ಚಿನ ಬಂಡಾಯಕ್ಕೆ ದಾರಿ ಮಾಡಿಕೊಡುತ್ತವೆ’’ ಎಂದು ಸಂಪಾದಕೀಯ ಅಭಿಪ್ರಾಯಪಟ್ಟಿದೆ.ಕಾಶ್ಮೀರಿಗಳ ಕನಸು ಕಾಣುವ ಅವಕಾಶವನ್ನು ಕಸಿದುಕೊಂಡರೆ ಭಾರತೀಯ ಪ್ರಜಾಸತ್ತೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತದೆ ಎಂದು ಅದು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News