ಕನಕನಕಿಂಡಿ ಅಸಮಾನತೆಯ ಪ್ರತೀಕ: ಡಾ.ಮಹಾಬಲೇಶ್ವರ ರಾವ್

Update: 2017-04-24 13:19 GMT

ಉಡುಪಿ, ಎ.24: ಕನಕದಾಸರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣನ ತಿರುಗಿ ದರ್ಶನ ನೀಡಿದ ಕನಕನ ಕಿಂಡಿಯನ್ನು ಅಸಮಾನತೆಯ ಕ್ರೌರ್ಯ ಹಾಗೂ ಪ್ರತೀಕವಾಗಿ ಕಾಣಬಹುದು. ಈಗಲೂ ಕೂಡ ಅಸ್ಪೃಶ್ಯರು ಹಾಗೂ ಕೆಳ ಜಾತಿಯವರಿಗೆ ದೇವಸ್ಥಾನಗಳಿಗೆ ಪ್ರವೇಶ ನೀಡುತ್ತಿಲ್ಲ ಎಂದು ಉಡುಪಿ ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.

ಉಡುಪಿ ಕನಕ ಅಧ್ಯಯನ ಪೀಠ, ಮಣಿಪಾಲ ವಿಶ್ವವಿದ್ಯಾಲಯ ಮತ್ತು ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕ ಸಭಾಂಗಣ ದಲ್ಲಿ ಆಯೋಜಿಸಲಾದ ಏಳು ದಿನಗಳ ಕನಕದಾಸ ಕೀರ್ತನ ಮತ್ತು ಸಂಗೀತ ರಸಗ್ರಹಣ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕನಕದಾಸರ ಭಕ್ತಿಗೆ ಒಲಿದ ಶ್ರೀಕೃಷ್ಣ ತಿರುಗಿ ದರ್ಶನ ನೀಡಿದ ಹಾಗೂ ಕನಕನ ಕಿಂಡಿ ಸೃಷ್ಠಿಯಾಯಿತು ಎಂಬ ಹಲವು ಐತಿಹ್ಯಗಳಿವೆ. ಅದೇ ರೀತಿ ಮಧ್ವಾ ಚಾರ್ಯರು ಕೃಷ್ಣನ ಮೂರ್ತಿಯನ್ನು ಪೂರ್ವಾಭಿಮುಖದ ಬದಲು ಪಶ್ಚಿಮಾಭಿ ಮುಖವಾಗಿಯೇ ಸ್ಥಾಪಿಸಿದ್ದರು ಎಂಬ ಚರ್ಚೆಗಳು ಕೂಡ ನಡೆದಿವೆ. ಆದರೆ ಕನಕನ ಕಿಂಡಿ ಹೇಗೆ ಸೃಷ್ಟಿಯಾಯಿತು ಎಂಬುದಕ್ಕೆ ಕೃಷ್ಣ ಮಠದ ಇತಿಹಾಸ, ಶಾಸನ ಅಥವಾ ಕನಕದಾಸರ ಕೃತಿಗಳಲ್ಲಿ ಉಲ್ಲೇಖವಿಲ್ಲ. ಆದುದರಿಂದ ಇದು ಹೆಚ್ಚು ಹೆಚ್ಚು ಜನರ ಬರುವಂತೆ ಮಾಡಿರುವ ಕಟ್ಟುಕಥೆಯೂ ಆಗಿರಬಹುದು ಎಂದರು.

ನಮ್ಮಲ್ಲಿರುವ 250 ದಾಸರ ಪೈಕಿ ಕನಕದಾಸರು ಒಬ್ಬರೇ ಶೂದ್ರ ದಾಸರು. ಅವರು 315 ಕೀರ್ತನೆಗಳನ್ನು ರಚಿಸಿದ್ದಾರೆ. ಅವರು ದಾಸರು ಮಾತ್ರವಲ್ಲ ಕನ್ನಡದ ಶ್ರೇಷ್ಠ ಕವಿಯಾಗಿದ್ದರು. ಅವರ ಕಾವ್ಯವನ್ನು ನಾವು ಸರಿಯಾಗಿ ತಿಳಿದು ಕೊಳ್ಳಬೇಕಾಗಿದೆ. ಇಂದಿನ ಕಾಲಘಟ್ಟದಲ್ಲಿ ಸಂಶೋಧನೆಗಳನ್ನು ಹೊಸ ದೃಷ್ಠಿಯಿಂದ ನೋಡಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾ ವಿಮರ್ಶಕ ಎ.ಈಶ್ವರಯ್ಯ ಮಾತನಾಡಿ, ದೇವರ ನಾಮಗಳ ದಾಖಲೀಕರಣ ಮತ್ತು ರಾಗ ಸಂಯೋಜನೆ ನೀಡುವ ಕೆಲಸ ಆಗಬೇಕಾಗಿದೆ. ಈ ಮೂಲಕ ನಮ್ಮ ಪರಂಪರೆಯ ಸಂಪತ್ತನ್ನು ಉಳಿಸಲು ಸಾಧ್ಯವಾಗುತ್ತದೆ. ಸಂಗೀತ ಮತ್ತು ಸಾಹಿತ್ಯವು ಭಿನ್ನವಾದುದು. ಒಂದಕ್ಕೊಂದು ಸಂಬಂಧವೇ ಇಲ್ಲ. ಕೇವಲ ನಾದದಿಂದಲೇ ಅಸ್ತಿತ್ವ ಸ್ಥಾಪಿಸುವ ಶಕ್ತಿ ಸಂಗೀತಕ್ಕೆ ಇದೆ ಎಂದು ಹೇಳಿದರು.

ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವೃಂದಾ ಆಚಾರ್ಯ ಬೆಂಗಳೂರು ಹಾಗೂ ಅರವಿಂದ ಹೆಬ್ಬಾರ್, ಕನಕ ಅಧ್ಯಯನ ಪೀಠದ ಸಹ ಸಂಯೋಜನಾಧಿ ಕಾರಿ ಡಾ.ಅಶೋಕ್ ಅಳ್ವ ಉಪಸ್ಥಿತರಿದ್ದರು.

ಪೀಠದ ಸಂಯೋಜನಾಧಿಕಾರಿ ಡಾ.ವರದೇಶ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಿಗಮ ಭಾರತಿಯ ನಿರ್ದೇಶಕ ಡಾ.ಉದಯ ಶಂಕರ್ ಸ್ವಾಗತಿಸಿದರು. ನಿರ್ದೇಶಕಿ ಉಮಾಶಂಕರಿ ವಂದಿಸಿದರು. ಉಪನ್ಯಾಸಕಿ ಅಪೂರ್ವ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News