ಫ್ರಾನ್ಸ್ ಚುನಾವಣೆ: ಇಮಾನುಯೆಲ್, ಪೆನ್‌ಗೆ ಅಗ್ರ ಸ್ಥಾನ

Update: 2017-04-24 14:00 GMT

ಪ್ಯಾರಿಸ್, ಎ. 24: ರವಿವಾರ ನಡೆದ ಫ್ರಾನ್ಸ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಐರೋಪ್ಯ ಒಕ್ಕೂಟದ ಪರವಾಗಿರುವ ಇಮಾನುಯೆಲ್ ಮ್ಯಾಕ್ರನ್ ಮತ್ತು ಕಟ್ಟಾ ಬಲಪಂಥೀಯ ಎದುರಾಳಿ ಮರೀನ್ ಲೆ ಪೆನ್ ಎರಡು ಅಗ್ರ ಸ್ಥಾನಗಳನ್ನು ಪಡೆದಿದ್ದಾರೆ.

ಮೇ 7ರಂದು ನಡೆಯಲಿರುವ ಎರಡನೆ ಸುತ್ತಿನ ಸ್ಪರ್ಧೆಯಲ್ಲಿ ಇವರಿಬ್ಬರು ಮುಖಾಮುಖಿಯಾಗುತ್ತಾರೆ.

ಅದೇ ವೇಳೆ, ಫ್ರಾನ್ಸ್‌ನ ಆಧುನಿಕ ಇತಿಹಾಸದ ಅತ್ಯಂತ ಕಿರಿಯ ನಾಯಕನಾಗಿ ಹೊರಹೊಮ್ಮುವ ಸ್ಪಷ್ಟ ಸೂಚನೆಯನ್ನು ಇಮಾನುಯೆಲ್ ಮ್ಯಾಕ್ರನ್ ನೀಡಿದ್ದಾರೆ.
ಮೊದಲ ಹಂತದ ಚುನಾವಣೆಯಲ್ಲಿ ಮ್ಯಾಕ್ರನ್ 23.9 ಶೇಕಡ ಮತಗಳನ್ನು ಪಡೆದರೆ, ಅವರ ನಿಕಟ ಸ್ಪರ್ಧಿ ನ್ಯಾಶನಲ್ ಫ್ರಂಟ್ (ಎಫ್‌ಎನ್) ನಾಯಕಿ ಲೆ ಪೆನ್ 21.7 ಶೇ. ಮತಗಳನ್ನು ಗಳಿಸಿದ್ದಾರೆ ಎಂದು ಸರಕಾರಿ ಟೆಲಿವಿಶನ್ ವರದಿ ಮಾಡಿದೆ.

‘‘ರಾಷ್ಟ್ರೀಯವಾದಿಗಳ ಬೆದರಿಕೆಗಳನ್ನು ಎದುರಿಸಿ, ದೇಶಭಕ್ತರ ಅಧ್ಯಕ್ಷನಾಗಲು ನಾನು ಬಯಸುತ್ತೇನೆ’’ ಎಂದು 39 ವರ್ಷದ ಮ್ಯಾಕ್ರನ್ ಪ್ಯಾರಿಸ್‌ನಲ್ಲಿ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.ಫಲಿತಾಂಶ ಹೊರಬೀಳುತ್ತಿದ್ದಂತೆಯೇ, ಡಾಲರ್ ಮತ್ತು ಯೆನ್ ಕರೆನ್ಸಿಗಳ ವಿರುದ್ಧ ಯುರೋ ಸಾಕಷ್ಟು ಮೇಲುಗೈ ಸಾಧಿಸಿತು.

ಮಾಜಿ ಬ್ಯಾಂಕರ್ ಮತ್ತು ಮಾಜಿ ಹಣಕಾಸು ಸಚಿವರಾಗಿರುವ ಮ್ಯಾಕ್ರನ್, ಫ್ರಾನ್ಸ್‌ನ ಸಾಂಪ್ರದಾಯಿಕ ಪಕ್ಷಗಳನ್ನು ಜನರು ತಿರಸ್ಕರಿಸಿರುವುದನ್ನು ಫಲಿತಾಂಶ ಸ್ಪಷ್ಟವಾಗಿ ತೋರಿಸಿದೆ ಎಂದರು.

ಆರು ದಶಕಗಳಲ್ಲೇ ಮೊದಲ ಬಾರಿಗೆ ಪ್ರಧಾನವಾಹಿನಿಯ ರಿಪಬ್ಲಿಕನ್ ಮತ್ತು ಸೋಶಿಯಲಿಸ್ಟ್ ಪಕ್ಷಗಳು ಎರಡನೆ ಸುತ್ತಿನ ಸ್ಪರ್ಧೆಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವುದು ಗಮನಾರ್ಹವಾಗಿದೆ.

ವಲಸೆ ವಿರೋಧಿ ಮತ್ತು ಯುರೋಪ್ ವಿರೋಧಿ ಮಾತುಗಳನ್ನು ಆಡುತ್ತಾ ಬಂದಿರುವ ಕಟ್ಟಾ ಬಲಪಂಥೀಯ ಅಭ್ಯರ್ಥಿ ಮರೀನ್ ಲೆ ಪೆನ್ಸ್ ಹಿನ್ನಡೆ ಅನುಭವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News