ಚಾಂಪಿಯನ್ಸ್ ಟ್ರೋಫಿ: ನ್ಯೂಝಿಲೆಂಡ್, ಶ್ರೀಲಂಕಾ ತಂಡ ಪ್ರಕಟ

Update: 2017-04-24 17:34 GMT

ಹೊಸದಿಲ್ಲಿ, ಎ.24: ಇಂಗ್ಲೆಂಡ್‌ನಲ್ಲಿ ಜೂನ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳನ್ನು ಸೋಮವಾರ ಪ್ರಕಟಿಸಲಾಗಿದೆ.

 ನ್ಯೂಝಿಲೆಂಡ್ ತಂಡಕ್ಕೆ ಆಡಮ್ ಮಿಲ್ನೆ ಹಾಗೂ ಮಿಚೆಲ್ ಮೆಕ್ಲಿನಘನ್ ವಾಪಸಾಗಿದ್ದಾರೆ. ಮೆಕ್ಲಿನಘನ್ ಇತ್ತೀಚೆಗೆ ಜನವರಿಯಲ್ಲಿ ನ್ಯೂಝಿಲೆಂಡ್ ಪರ ಆಡಿದ್ದರು. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಒಟ್ಟು 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ್ದ ಮೆಕ್ಲಿನಘನ್ ಈತನಕ ಒಟ್ಟು 82 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

 ಕಳೆದ 7 ವರ್ಷಗಳಿಂದ ನ್ಯೂಝಿಲೆಂಡ್‌ನ ಪರ ಆಡುತ್ತಿರುವ 25ರ ಹರೆಯದ ಮಿಲ್ನೆ ಗಾಯದ ಸಮಸ್ಯೆಯಿಂದಾಗಿ ಕೇವಲ 51 ಪಂದ್ಯಗಳನ್ನು ಆಡಿದ್ದರು. ನ್ಯೂಝಿಲೆಂಡ್ ಜೂ.2 ರಂದು ಆಸ್ಟ್ರೇಲಿಯ ವಿರುದ್ಧ ಆಡುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಮ್ಯಾಥ್ಯೂಸ್, ಮಾಲಿಂಗ ವಾಪಸ್: ಫಿಟ್‌ನೆಸ್ ಪಡೆದಿರುವ ಆ್ಯಂಜೆಲೊ ಮ್ಯಾಥ್ಯೂಸ್ ಹಾಗೂ ಲಸಿತ ಮಾಲಿಂಗ ಚಾಂಪಿಯನ್ಸ್ ಟ್ರೋಫಿಗೆ ಶ್ರೀಲಂಕಾ ಘೋಷಿಸಿರುವ 15 ಸದಸ್ಯರ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಮ್ಯಾಥ್ಯೂಸ್ ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ ಹಾಗೂ ಬಾಂಗ್ಲಾದೇಶ ವಿರುದ್ಧ ವಿರುದ್ಧ ಏಕದಿನ ಸರಣಿಯಿಂದ ವಂಚಿತರಾಗಿದ್ದರು. ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಡೆಲ್ಲಿ ಫ್ರಾಂಚೈಸಿ ಪರ ಆಡುತ್ತಿದ್ದಾರೆ.

ಮಂಡಿನೋವಿನಿಂದಾಗಿ ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ವಿಶ್ವ ಟ್ವೆಂಟಿ-20 ಚಾಂಪಿಯನ್‌ಶಿಪ್‌ನಿಂದ ದೂರ ಉಳಿದಿದ್ದ ಮಾಲಿಂಗ ಇದೀಗ ಸ್ಪರ್ಧಾತ್ಮಕ ಟೂರ್ನಿಗೆ ಮರಳಿದ್ದಾರೆ. 2011ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಮಾಲಿಂಗ 2015ರಲ್ಲಿ ಏಕದಿನ ಪಂದ್ಯವನ್ನು ಆಡಿದ್ದರು. ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯ ವಿರುದ್ಧ ಟ್ವೆಂಟಿ-20 ಪಂದ್ಯಗಳನ್ನು ಆಡುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಿದ್ದರು.

ಶ್ರೀಲಂಕಾ ತಂಡ ದಿಲ್‌ರುವಾನ್ ಪೆರೇರ ಹಾಗೂ ಧನುಶ್ಕಾ ಗುಣತಿಲಕ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ.

ನ್ಯೂಝಿಲೆಂಡ್ ತಂಡ: ಕೇನ್ ವಿಲಿಯಮ್ಸನ್(ನಾಯಕ), ಮಾರ್ಟಿನ್ ಗಪ್ಟಿಲ್, ಟಾಮ್ ಲಥಾಮ್, ಲೂಕ್ ರಾಂಚಿ, ರಾಸ್ ಟೇಲರ್, ನೀಲ್ ಬ್ರೂಮ್, ಜಿಮ್ಮಿ ನೀಶಾಮ್, ಕೋರಿ ಆ್ಯಂಡರ್ಸನ್, ಮಿಚೆಲ್ ಸ್ಯಾಂಟ್ನರ್, ಕಾಲಿನ್ ಡಿ ಗ್ರಾಂಡ್‌ಹೊಮ್, ಜೀತನ್ ಪಟೇಲ್, ಟಿಮ್ ಸೌಥಿ, ಆಡಮ್ ಮಿಲ್ನೆ, ಮಿಚೆಲ್ ಮೆಕ್ಲಿನಘನ್, ಟ್ರೆಂಟ್ ಬೌಲ್ಟ್.

ಶ್ರೀಲಂಕಾ ತಂಡ: ಆ್ಯಂಜೆಲೊ ಮ್ಯಾಥ್ಯೂಸ್(ನಾಯಕ), ಉಪುಲ್ ತರಂಗ, ನಿರೊಶನ್ ಡಿಕ್‌ವೆಲ್ಲಾ, ಕುಶಾಲ್ ಪೆರೇರ, ಕುಶಾಲ್ ಮೆಂಡಿಸ್, ಚಾಮರ ಕಪುಗಡೆರ, ಅಸೆಲಾ ಗುಣರತ್ನೆ, ದಿನೇಶ್ ಚಾಂಡಿಮಲ್, ಲಸಿತ್ ಮಾಲಿಂಗ, ಸುರಂಗ ಲಕ್ಮಲ್, ನುವಾನ್ ಪ್ರದೀಪ್, ನುವಾನ್ ಕುಲಶೇಖರ, ತಿಸಾರ ಪೆರೇರ, ಲಕ್ಷಣ್ ಸಡಕನ್, ಸೀಕುಗೆ ಪ್ರಸನ್ನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News