ನ್ಯಾಯಾಧೀಶರ ನೇಮಕ: ಕೇಂದ್ರ- ಸುಪ್ರೀಂ ಹಗ್ಗಜಗ್ಗಾಟ

Update: 2017-04-25 03:54 GMT

ಹೊಸದಿಲ್ಲಿ, ಎ.25: ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಕೊಲಾಜಿಯಂ ಮತ್ತು ಕೇಂದ್ರ ಸರಕಾರದ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಕೊಲಾಜಿಯಂ ಶಿಫಾರಸ್ಸು ಮಾಡಿದ್ದ 19 ಮಂದಿಯ ಹೆಸರನ್ನು ಕೇಂದ್ರ ಸರಕಾರ ಎರಡು ಬಾರಿ ತಿರಸ್ಕರಿಸಿದರೂ ಮತ್ತೆ ಅದೇ ಪಟ್ಟಿಯನ್ನು ಕೊಲಾಜಿಯಂ ಕೇಂದ್ರಕ್ಕೆ ನೀಡಿರುವುದು ಇತಿಹಾಸದಲ್ಲೇ ಪ್ರಥಮ.

ಕೆಲ ದಿನಗಳ ಹಿಂದೆ ಈ ಸಂಬಂಧ ಕೊಲಾಜಿಯಂ ನಿರ್ಧಾರವನ್ನು ಕೇಂದ್ರಕ್ಕೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಇದೀಗ ಚೆಂಡು ಕೇಂದ್ರದ ಅಂಗಳದಲ್ಲಿದ್ದು, ಕೇಂದ್ರದ ನಡೆ ಕುತೂಹಲಕ್ಕೆ ಕಾರಣವಾಗಿದೆ. 

ಅಲಹಾಬಾದ್ ಹೈಕೋರ್ಟ್‌ಗೆ ಕೊಲಾಜಿಯಂ ಶಿಫಾರಸ್ಸು ಮಾಡಿದ್ದ 30 ಮಂದಿಯ ಹೆಸರಿನ ಪೈಕಿ ಇದೂ ಸೇರಿದೆ. ಸುಪ್ರೀಂಕೋರ್ಟ್‌ನ ಕ್ಲಿಯರೆನ್ಸ್ ಪಡೆದು 11 ಮಂದಿಯ ಹೆಸರನ್ನು ಅಂತಿಮಪಡಿಸಿದ ಕೇಂದ್ರ ಸರಕಾರ 19 ಹೆಸರುಗಳನ್ನು ವಾಪಸ್ ಕಳುಹಿಸಿತ್ತು. ಆದರೆ ಭಾರತದ ಮುಖ್ಯನ್ಯಾಯಮೂರ್ತಿ ತೀರ್ಥಸಿಂಗ್ ಠಾಕೂರ್ ನೇತೃತ್ವದ ಕೊಲಾಜಿಯಂ ತನ್ನ ನಿಲುವಿಗೆ ಬದ್ಧವಾಗಿತ್ತು. ಆದರೆ ಮೋದಿ ಸರಕಾರ ಪಟ್ಟು ಬಿಡದೇ ಎಲ್ಲ ಹೆಸರುಗಳನ್ನು ಮತ್ತೆ ಕೊಲಾಜಿಯಂಗೆ ವಾಪಸ್ ಕಳುಹಿಸಿತ್ತು. ಕೇಂದ್ರದ ಉದ್ಧಟತನ ವಿರುದ್ಧ ಸುಪ್ರೀಂಕೋರ್ಟ್ ಕೆಂಡ ಕಾರುವ ಮೂಲಕ ಸಂಘರ್ಷ ತಾರಕಕ್ಕೇರಿತ್ತು.

ಪ್ರಸ್ತುತ ಇರುವ ವಿಧಿವಿಧಾನಗಳ ಒಡಂಬಡಿಕೆ ಅನ್ವಯ, ಕೊಲಾಜಿಯಂ ತಾನು ಮಾಡಿರುವ ಶಿಫಾರಸ್ಸಿಗೆ ಬದ್ಧವಾಗಿದ್ದರೆ, ಅದನ್ನು ಅಂತಿಮಪಡಿಸುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ಆದರೆ ಕೇಂದ್ರ ಸರಕಾರ 19 ಮಂದಿಯ ನೇಮಕಾತಿಗೆ ನಿರಾಕರಿಸಿತ್ತು. ಕೊಲಾಜಿಯಂ ಹಾಗೂ ಸಲಹಾ ನ್ಯಾಯಾಧೀಶರ ಅಭಿಪ್ರಾಯಗಳು ಪರಸ್ಪರ ವೈರುಧ್ಯದಿಂದ ಕೂಡಿದೆ ಎಂಬ ಕಾರಣಕ್ಕೆ ಕೇಂದ್ರ ಸರಕಾರ ಈ ನೇಮಕಾತಿಯನ್ನು ತಡೆದಿತ್ತು. ಹಲವು ಪ್ರಕರಣಗಳಲ್ಲಿ ಸಲಹಾ ನ್ಯಾಯಾಧೀಶರ ಅಭಿಪ್ರಾಯವನ್ನು ಕಡೆಗಣಿಸಿ, ಕೊಲಾಜಿಯಂ ನಿರ್ಧಾರ ಕೈಗೊಂಡಿರುವ ನಿದರ್ಶನಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News