ಹುತಾತ್ಮರ ಬಲಿದಾನ ವ್ಯರ್ಥವಾಗಲ್ಲ: ಗೃಹಸಚಿವ ರಾಜನಾಥ್‌ ಸಿಂಗ್

Update: 2017-04-25 15:27 GMT

ರಾಯ್‌ಪುರ,ಎ.25: ನಕ್ಸಲರ ವಿರೋಧಿ ಸಮರದ ಕಾರ್ಯತಂತ್ರವನ್ನು ಕೇಂದ್ರ ಸರಕಾರವು ಪುರ್‌ರೂಪಿಸಲಿದೆಯೆಂದು ಗೃಹ ಸಚಿವ ರಾಜ್‌ನಾಥ್‌ಸಿಂಗ್ ರಾಜ್‌ನಾಥ್‌ಸಿಂಗ್ ಮಂಗಳವಾರ ತಿಳಿಸಿದ್ದಾರೆ.

 ಎಡಪಂಥೀಯ ತೀವ್ರವಾದವನ್ನು ಮೂಲೋತ್ಪಾಟನೆ ಮಾಡಲು ವಿವಿಧ ಮಾರ್ಗೋಪಾಯಗಳನ್ನು ಹುಡುಕಲು ಮೇ 8ರಂದು ಎಲ್ಲಾ ನಕ್ಸಲ್ ಪೀಡಿತ ರಾಜ್ಯಗಳ ಸಭೆ ನಡೆಯಲಿದೆಯೆಂದು ಅವರು ಹೇಳಿದ್ದಾರೆ.

 ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ ಬಲಿಯಾದ 26 ಮಂದಿ ಸಿಆರ್‌ಪಿಎಫ್ ಯೋಧರ ಪಾರ್ಥಿವ ದೇಹಗಳಿಗೆ ರಾಯ್‌ಪುರದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ನಕ್ಸಲ್ ವಿರೋಧಿ ಹೋರಾಟದ ಕಾರ್ಯತಂತ್ರದ ಪುನರಾವಲೋಕ ನಡೆಸಲಿದ್ದೇವೆ. ಅಗತ್ಯಬಿದ್ದಲ್ಲಿ ಅದನ್ನು ಪುನರ್‌ರೂಪಿಸಲಾಗುವುದು ಎಂದವರು ಹೇಳಿದರು. ಎಡಪಂಥೀಯ ಉಗ್ರವಾದದ ಪಿಡುಗನ್ನು ಬೇರುಸಮೇತ ಕಿತ್ತೊಗೆಯಲು ಕಾರ್ಯತಂತ್ರವೊಂದನ್ನು ರೂಪಿಸಲಾಗುತ್ತಿದೆಯೆಂದು ರಾಜ್‌ನಾಥ್ ತಿಳಿಸಿದರು.

 ಎಡಪಂಥೀಯ ಉಗ್ರಗಾಮಿ ಗುಂಪುಗಳು ಅಭಿವೃದ್ಧಿಗೆ ವಿರೋಧಿಯಾಗಿದ್ದು, ಅವರು ರಾಜ್ಯದ ಪ್ರಗತಿಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ ಎಂದರು. ಮಾವೊವಾದಿಗಳು ಅಮಾಯಕ ಬುಡಕಟ್ಟು ಜನರನ್ನು ಮಾನವ ಗುರಾಣಿಗಳಂತೆ ಬಳಸಿಕೊಳ್ಳುತ್ತಿದ್ದಾರೆಂದು ಗೃಹ ಸಚಿವರು ಹೇಳಿದರು.

‘‘ನಮ್ಮ ಯೋಧರ ಬಲಿದಾನ ವ್ಯರ್ಥವಾಗದು. ಬಸ್ತಾರ್ ಪ್ರಾಂತದಲ್ಲಿ ನಡೆಯುತ್ತಿರುವ ರಸ್ತೆಗಳ ಅಭಿವೃದ್ಧಿಯಿಂದ ನಕ್ಸಲರು ಹತಾಶರಾಗಿದ್ದಾರೆ. ಆದರೆ ಅವರು ತಮ್ಮ ದುಷ್ಟ ಉದ್ದೇಶಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಲಾರರೆಂದರು.ನಕ್ಸಲ್ ಹಾವಳಿಯನ್ನು ನಿಗ್ರಹಿಸಲು ಕೇಂದ್ರ ಹಾಗೂ ರಾಜ್ಯಗಳು ಒಗ್ಗೂಡಿ ಶ್ರಮಿಸಲಿವೆಯೆಂದು ರಾಜ್‌ನಾಥ್ ತಿಳಿಸಿದರು.

ಛತ್ತೀಸ್‌ಗಡದ ರಾಜ್ಯಪಾಲ ಬಲರಾಮ್‌ಜಿ ದಾಸ್ ಟಂಡನ್, ಮುಖ್ಯಮಂತ್ರಿ ರಮಣ್‌ಸಿಂಗ್, ಕೇಂದ್ರ ಸಹಾಯಕ ಗೃಹ ಸಚಿವ ಹಂಸ್‌ರಾಜ್ ಅಹಿರ್ ಹಾಗೂ ರಾಜ್ಯ ಸರಕಾರ ಹಾಗೂ ಅರೆಸೈನಿಕ ಪಡೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News