ವಿವೇಕ ಮೂರ್ತಿ ವಜಾ : ಭಾರತೀಯ - ಅಮೆರಿಕನ್ ವೈದ್ಯರ ಆಘಾತ

Update: 2017-04-25 14:26 GMT

ವಾಶಿಂಗ್ಟನ್, ಎ. 25: ಭಾರತೀಯ ಅಮೆರಿಕನ್ ವೈದ್ಯ ವಿವೇಕ್ ಮೂರ್ತಿಯನ್ನು ಅಮೆರಿಕದ ಸರ್ಜನ್ ಜನರಲ್ ಹುದ್ದೆಯಿಂದ ಟ್ರಂಪ್ ಆಡಳಿತ ವಜಾಗೊಳಿಸಿರುವುದಕ್ಕೆ ಭಾರತೀಯ-ಅಮೆರಿಕನ್ ವೈದ್ಯರ ಸಂಘಟನೆ ‘ಅಮೆರಿಕನ್ ಅಸೋಸಿಯೇಶನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಒರಿಜಿನ್ (ಎಎಪಿಐ)’ ಆಘಾತ ವ್ಯಕ್ತಪಡಿಸಿದೆ.

ಒಬಾಮ ಆಡಳಿತದಿಂದ ಸರ್ಜನ್ ಜನರಲ್ ಆಗಿ ನೇಮಿಸಲ್ಪಟ್ಟಿದ್ದ ಮೂರ್ತಿಯನ್ನು ಕಳೆದ ವಾರ ವಜಾಗೊಳಿಸಲಾಗಿತ್ತು. ಅವರು ಈ ಹುದ್ದೆಗೆ ಏರಿದ ಮೊದಲ ಭಾರತೀಯ ಅಮೆರಿಕನ್ ಆಗಿದ್ದಾರೆ.

ಅಮೆರಿಕದ ಸರ್ಜನ್ ಜನರಲ್ ಹುದ್ದೆಯಿಂದ ಮೂರ್ತಿಯ ನಿರ್ಗಮನದಿಂದ ತನಗೆ ‘ಆಘಾತ ಮತ್ತು ಬೇಸರ’ವಾಗಿದೆ ಎಂದು ಅಸೋಸಿಯೇಶನ್ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘2014ರಲ್ಲಿ ಅಮೆರಿಕದ ಸರ್ಜನ್ ಜನರಲ್ ಆದ ನಂತರದ ಕೇವಲ ಎರಡೇ ವರ್ಷಗಳಲ್ಲಿ ಎಎಪಿಐ ಸದಸ್ಯ ಡಾ. ವಿವೇಕ್ ಮೂರ್ತಿ ಆರೋಗ್ಯ ರಕ್ಷಣೆ ಕ್ಷೇತ್ರಕ್ಕೆ ಹಲವಾರು ದೇಣಿಗೆಗಳನ್ನು ನೀಡಿದ್ದಾರೆ. ಇದನ್ನು ಎಎಪಿಐ ಪರವಾಗಿ ನಾನು ಶ್ಲಾಘಿಸುತ್ತೇನೆ’’ ಎಂದು ಎಎಪಿಐ ಅಧ್ಯಕ್ಷ ಅಜಯ್ ಲೋಧಾ ಹೇಳಿದ್ದಾರೆ.

ದೇಶವನ್ನು ಕಾಡುತ್ತಿದ್ದ ಹಲವಾರು ಮಹತ್ವದ ಆರೋಗ್ಯ ಸಮಸ್ಯೆಗಳನ್ನು ಮುನ್ನೆಲೆಗೆ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News