ಗುಣಮಟ್ಟದ ರಾಜಕಾರಣದಿಂದ ಅಭಿವೃದ್ಧಿ ಸಾಧ್ಯ: ಪ್ರೊ.ಎಂ.ಚಂದ್ರ ಪೂಜಾರಿ

Update: 2017-04-25 18:26 GMT

ಉಡುಪಿ. ಎ.25: ಅಭಿವೃದ್ಧಿಗೂ ರಾಜಕೀಯಕ್ಕೂ ಸಂಬಂಧವಿದೆ. ಗುಣಮಟ್ಟದ ರಾಜಕಾರಣವಿಲ್ಲದೆ ಗುಣಮಟ್ಟದ ಅಭಿವೃದ್ಧಿ ಸಾಧ್ಯವೇ ಇಲ್ಲ. ಜಾತಿ, ಧರ್ಮವನ್ನು ಒಡೆದು ಆಳುವ ರಾಜಕಾರಣದಿಂದ ದೇಶದ ಅಭಿವೃದ್ಧಿ ಆಗುವುದಿಲ್ಲ. ಆದುದರಿಂದ ಅಭಿವೃದ್ಧಿ ಜೊತೆಗೆ ರಾಜಕಾರಣ ಬಗ್ಗೆಯೂ ಚರ್ಚೆ ನಡೆಸಬೇಕಾಗಿದೆ ಎಂದು ಹಂಪಿ ಕನ್ನಡ ವಿವಿ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಚಂದ್ರ ಪೂಜಾರಿ ಹೇಳಿದ್ದಾರೆ.

ಡೇವಿಡ್ ಎ.ಕರ್ಕಡ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಸಿಪಿಎಂ ಮುಖಂಡ ಡೇವಿಡ್ ಎ.ಕರ್ಕಡರ ನಿಧನದ 10ನೆ ವರ್ಷದ ಪ್ರಯುಕ್ತ ಮಂಗಳವಾರ ಬನ್ನಂಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ಆಯೋಜಿಸಲಾದ ‘ಉಡುಪಿ ಜಿಲ್ಲೆಯ ಅಭಿವೃದ್ಧಿ- ಪರ್ಯಾಯ ಕಣ್ಣೋಟ’ ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ವಿಚಾರ ಮಂಡಿಸಿ ಮಾತನಾಡುತ್ತಿದ್ದರು.

ಶೇ.30ರಷ್ಟು ಮಂದಿಗೆ ಮಾತ್ರ ಭಾರತ ಸ್ವರ್ಗವಾಗಿದೆ. ಈ ದೇಶದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಅಡಿಪಾಯವಾಗಿರುವ ಉಳಿದ ಶೇ.70 ರಷ್ಟು ಮಂದಿಯಲ್ಲಿ ಬಹುತೇಕರು ಮೂರು ಹೊತ್ತಿನ ಊಟಕ್ಕೂ ಗತಿ ಇಲ್ಲದೆ ಬದುಕುತ್ತಿದ್ದಾರೆ. ಇದರಿಂದಾಗಿ ಈ ದೇಶದಲ್ಲಿ ಪಿರಮಿಡ್ ರೂಪದ ಅಭಿವೃದ್ಧಿ ರಚನೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಭಾರತದಲ್ಲಿ ಶೇ.50ರಷ್ಟಿರುವ ಮಹಿಳೆಯರಿಗೆ ಶೇ.10ರಷ್ಟು, ಶೇ.20ರಷ್ಟಿರುವ ಅಲ್ಪಸಂಖ್ಯಾತರಿಗೆ ಶೇ.10ರಷ್ಟು ಮಾತ್ರ ರಾಜಕೀಯ ಪ್ರತಿನಿಧಿಗಳಿರುವುದು. ದಲಿತರು ಬುಡಕಟ್ಟು ಜನರಿಗೆ ಇರುವ ಶೇ.25ರಷ್ಟು ಜನಪ್ರತಿನಿಧಿಗಳು ಕೇವಲ ಹೆಸರಿಗೆ ಮಾತ್ರ. ಹೀಗಾಗಿ ಈ ದೇಶದ ಶೇ.75ರಷ್ಟು ಮಂದಿಗೆ ರಾಜಕೀಯ ಪ್ರಾತಿನಿಧ್ಯತೆ ಇಲ್ಲವಾಗಿದೆ. ಹೀಗಾಗಿ ಈ ಸರಕಾರವನ್ನು ಅನುಕೂಲಸ್ಥರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಅವರು ಜಾರಿಗೆ ತರುವ ನೀತಿಗಳಲ್ಲೆವೂ ಅವರ ಪರವಾಗಿಯೇ ಇರುತ್ತದೆ ಎಂದು ಅವರು ತಿಳಿಸಿದರು.

ಭಾರತದಲ್ಲಿ ಶೇ.90ರಷ್ಟು ಮಂದಿಯ ವಾರ್ಷಿಕ ಆದಾಯ ತಲಾ ಒಂದು ಲಕ್ಷ ರೂ. ಆಗಿದ್ದರೆ, ಶಾಸಕರು, ಸಂಸದರ ಆದಾಯ ಕೋಟಿಗಿಂತ ಹೆಚ್ಚು. ಭಾರತದಲ್ಲಿ ಅನುಕೂಲಸ್ಥರು ಶೇ.35ರಷ್ಟು ತೆರಿಗೆ ಪಾವತಿಸಿದರೆ ಅನನುಕೂಲಸ್ಥರು ಶೇ.65ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ. ನಮ್ಮ ತೆರಿಗೆ ನೀತಿ ಕೂಡ ಶ್ರೀಮಂತರ ಪರ ಹಾಗೂ ಬಡವರ ವಿರುದ್ಧ ಇದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಸುರತ್ಕಲ್ ಎನ್‌ಐಟಿಕೆಯ ಡಾ.ರಾಜೇಂದ್ರ ಉಡುಪ ಮಾತನಾಡಿದರು. ವೇದಿಕೆಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಅದಮಾರು ಶ್ರೀಪತಿ ಆಚಾರ್ಯ, ಕಾರ್ಯದರ್ಶಿ ಕೆ.ಶಂಕರ್, ವಿಶ್ವನಾಥ ರೈ, ಗಿಲ್ಬರ್ಟ್ ಕರ್ಕಡ ಉಪಸ್ಥಿತರಿದ್ದರು.

ಜಿಲ್ಲೆಯಲ್ಲೂ ಪಿರಮಿಡ್ ರೂಪದ ಅಭಿವೃದ್ಧಿ!

ಉಡುಪಿ ಜಿಲ್ಲೆಯ ಅಭಿವೃದ್ಧಿ ಮೇಲ್ನೋಟಕ್ಕೆ ಸುಂದರವಾಗಿ ಕಂಡರೂ ಆಳದಲ್ಲಿ ತುಂಬಾ ಸಮಸ್ಯೆ ಇದೆ. ಶಿಕ್ಷಣ, ಆರೋಗ್ಯ, ಲಿಂಗಾನುಪಾತ, ಕೃಷಿಯಲ್ಲಿ ಸಾಕಷ್ಟು ಹಿನ್ನಡೆ ಕಂಡುಬರುತ್ತಿದೆ. ಶೇ.71ರಷ್ಟು ಮಂದಿ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿದ್ದಾರೆ. ಆದರೆ ಜಿಲ್ಲೆಯ ಆದಾಯ ಕೃಷಿ ಕ್ಷೇತ್ರದಲ್ಲಿ ಶೇ.17, ಕೈಗಾರಿಕೆ ಕ್ಷೇತ್ರದಲ್ಲಿ ಶೇ.30 ಮತ್ತು ಸೇವಾ ಕ್ಷೇತ್ರದಲ್ಲಿ ಶೇ.53. ಈ ಅಭಿವೃದ್ಧಿಯು ಪ್ರಾಕೃತಿಕ ಬೆಳವಣಿಗೆಯಲ್ಲ ಎಂದು ಪ್ರೊ.ಎಂ.ಚಂದ್ರ ಪೂಜಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News