ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಚುನಾವಣೆ

Update: 2017-04-25 18:41 GMT

ಪುತ್ತೂರು ಎಪಿಎಂಸಿ ಶೇ. 43.96 ಮತದಾನ

ಪುತ್ತೂರು, ಎ.25: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಪುತ್ತೂರು ಇದರ 12 ಕ್ಷೇತ್ರಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ. 43.96 ಮತದಾನವಾಗಿದೆ. ತಾಲೂಕಿನಲ್ಲಿ ಬೆಳಗ್ಗೆ 8ರಿಂದ ಸಂಜೆ 4ರ ತನಕ ಮತದಾನ ಶಾಂತಿಯುತವಾಗಿ ನಡೆದಿದೆ. ಕ್ಷೇತ್ರದಲ್ಲಿ ಒಟ್ಟು 53,739 ಮತದಾರರಿದ್ದು ಈ ಪೈಕಿ 17,743 ಪುರುಷರು ಹಾಗೂ 5,879 ಮಹಿಳೆಯರು ಸೇರಿದಂತೆ ಒಟ್ಟು 23,622 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಿಳಿನೆಲೆಯ 18ನೆ ಮತಗಟ್ಟೆಯಲ್ಲಿ ಅತಿ ಹೆಚ್ಚು ಶೇ. 77.92 ಮತದಾನವಾಗಿದೆ. ಕುಟ್ರುಪ್ಪಾಡಿಯ 24ನೆ ಮತಗಟ್ಟೆಯಲ್ಲಿ ಶೇ. 71.68 ಮತದಾನ ನಡೆದು ಎರಡನೇ ಸ್ಥಾನ ಗಳಿಸಿದೆ. ಅತಿ ಕಡಿಮೆ ಮತದಾನ ನಡೆದ ಕೊಲದ 31ನೆ ಮತಗಟ್ಟೆಯಲ್ಲಿ ಶೇ. 15.67 ಮತದಾನ ದಾಖಲಾಗಿದೆ. ವರ್ತಕ ಕ್ಷೇತ್ರಕ್ಕೆ ಪುತ್ತೂರು ನಗರದ ಎಪಿಎಂಸಿ ಯಾರ್ಡ್ ಮತಗಟ್ಟೆಯಲ್ಲಿ ಮತದಾನ ನಡೆದಿದ್ದು, ಇಲ್ಲಿ ಶೇ. 76.06 ಮತ ಚಲಾವಣೆಯಾಗಿದೆ. ಮತಗಳ ಎಣಿಕೆ ಕಾರ್ಯ ಎ.27ರಂದು ನಡೆಯಲಿದೆ.

  • ಉಪ್ಪಿನಂಗಡಿ: ಮತದಾರರ ಪಟ್ಟಿಯಲ್ಲಿ ಅವಾಂತರ!

ಉಪ್ಪಿನಂಗಡಿ, ಎ.25: ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಬಾರಿಯ ಎಪಿಎಂಸಿ ಚುನಾವಣೆಯ ಮತದಾರರ ಪಟ್ಟಿ ಯಲ್ಲಿ ಹಲವರ ಹೆಸರುಗಳು ತಪ್ಪಾಗಿ ಮುದ್ರಣವಾಗಿದೆ.ಇದ ರಿಂದ ಅನೇಕ ಮಂದಿ ಮತದಾನದಿಂದ ವಂಚಿತರಾಗಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದೆಲ್ಲಾ ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪು ಆಗು ವುದು, ವಯಸ್ಸು ವ್ಯತ್ಯಾಸ, ಗಂಡು, ಹೆಣ್ಣು ಆಗುವುದು ಮೊದ ಲಾದ ತಪ್ಪುಗಳು ನಡೆಯುತ್ತಿತ್ತು. ಆದರೆ ಈ ಬಾರಿಯ ಎಪಿಎಂಸಿ ಚುನಾವಣೆಯ ಮತದಾರ ಪಟ್ಟಿಯಲ್ಲಿ ಜಾತಿ, ಧರ್ಮ, ಪತಿ, ತಂದೆಯನ್ನೇ ಬದಲಾಯಿಸಿ ಮನಸ್ಸು ನೋಯಿಸುವ ಕೆಲಸ ನಡೆದಿದೆ. ಉಪ್ಪಿನಂಗಡಿ ಕೃಷಿಕ ಮತದಾರರ ಕ್ಷೇತ್ರದ ಭಾಗ ಸಂಖ್ಯೆ 6, ಕ್ರಮ ಸಂಖ್ಯೆ 464ರಲ್ಲಿ ಎಂ. ಇದಿನಬ್ಬ ಎಂಬವರ ತಂದೆಯ ಹೆಸರನ್ನು ತಿಮ್ಮಪ್ಪಗೌಡ ಎಂದು ಮುದ್ರಿಸಲಾಗಿದೆ. ಇದೇ ಭಾಗ ಸಂಖ್ಯೆಯ ಇನ್ನೊಂದು ಕಡೆಯಲ್ಲಿ ನರಸಿಂಹ ಪ್ರಕಾಶ್‌ರ ತಂದೆಯ ಹೆಸರು ನರಸಿಂಹ ಪ್ರಭು ಎಂದು ತಪ್ಪಾಗಿ ಮುದ್ರಿತವಾಗಿದೆ. ಹಿರೇಬಂಡಾಡಿ ಗ್ರಾಮದ ಭಾಗ ಸಂಖ್ಯೆ 7ರಲ್ಲಿ ಗೋಪಾಲಕೃಷ್ಣ ತೋಳ್ಪಾಡಿತ್ತಾಯರ ತಂದೆಯ ಹೆಸರು ಶೀನ ಶೆಟ್ಟಿ ಎಂದು ಮುದ್ರಿತವಾಗಿದೆ. ಇದೇ ಭಾಗ ಸಂಖ್ಯೆಯಲ್ಲಿ ಗಣರಾಜ ಭಟ್ ಬದಲಾಗಿ ಗಣರಾಜ ರೈ ಎಂದು ಮುದ್ರಿತವಾಗಿದೆ. ಪೆರಾಬೆ ಗ್ರಾಮದ ಭಾಗ ಸಂಖ್ಯೆ 4ರಲ್ಲಿ ಮುಸ್ಲಿಮ್ ಮಹಿಳೆಯೋರ್ವರ ಗಂಡನ ಹೆಸರು ಅಬೂಬಕರ್ ರೈ ಎಂದು ಮುದ್ರಿತವಾಗಿದೆ. ಆದ್ದರಿಂದ ಇಂತಹ ತಪ್ಪುಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತರು ಆಗ್ರಹ ವ್ಯಕ್ತಪಡಿಸಿದ್ದಾರೆ.

  • ಸುಳ್ಯ: ಶಾಂತಿಯುತ ಮತದಾನ

ಸುಳ್ಯ, ಎ.25: ಸುಳ್ಯ ಕೃಷಿ ಉತ್ಪನ್ನ ಸಮಿತಿ(ಎಪಿಎಂಸಿ)ಯ 11 ಕ್ಷೇತ್ರಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶಾಂತಿ ಯುತ ಮತದಾನ ಜರಗಿದ್ದು, ಒಟ್ಟು 50.52 ಶೇ. ಹಕ್ಕು ಚಲಾ ವಣೆಯಾಗಿದೆ.

 ಒಟ್ಟು 11,607 ಪುರುಷರು, 3,940 ಮಹಿಳೆಯರ ಸಹಿತ ಒಟ್ಟು 15,557 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ 90.34 ಗರಿಷ್ಠ ಮತದಾನವಾಗಿದ್ದರೆ, ಕೃಷಿಕರ ಕ್ಷೇತ್ರ ಪೈಕಿ ಮಡಪ್ಪಾಡಿ ಗರಿಷ್ಠ 85 ಶೇ., ಐವರ್ನಾಡು ಗರಿಷ್ಠ 72.76 ಶೇ. ಹಾಗೂ ಮಂಡೆಕೋಲು ಕ್ಷೇತ್ರದಲ್ಲಿ ಕನಿಷ್ಠ 32.75 ಶೇ. ಮತದಾನವಾಗಿದೆ.

 ಪ್ರತೀ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಸಹಿತ ಒಟ್ಟು 5 ಮಂದಿ ಸಿಬ್ಬಂದಿ ಹಾಗೂ ಭದ್ರತೆಗಾಗಿ ತಲಾ 2 ಪೊಲೀಸರು ಕಾರ್ಯನಿರ್ವಹಿಸಿದ್ದರು. ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ನಾಲ್ವರು ಎಸ್ಸೈ, 10 ಮಂದಿ ಎಎಸ್ಸೈ, 60 ಕಾನ್‌ಸ್ಟೇಬಲ್‌ಗಳು, 40 ಮಂದಿ ಗೃಹರಕ್ಷಕ ಸಿಬ್ಬಂದಿ ಹಾಗೂ 12 ಪೊಲೀಸ್ ವಾಹನಗಳ ಗಸ್ತಿನೊಂದಿಗೆ ಮತದಾನ ಪ್ರಕ್ರಿಯೆಗೆ ಭದ್ರತೆ ನೀಡಲಾಯಿತು. ಮತಪೆಟ್ಟಿಗೆಗಳನ್ನು ಎಪಿಎಂಸಿ ಯಾರ್ಡ್‌ನಲ್ಲಿ ಇರಿಸಿದ್ದು ನಾಳೆ ಪೂರ್ವಾಹ್ನ ಮತ ಎಣಿಕೆ ನಡೆಯಲಿದೆ.

ಮತದಾನದ ನಡೆಯುತ್ತಿದ್ದಂತೆ ಎರಡು ಪಕ್ಷಗಳ ಪ್ರಮುಖರು ತಮ್ಮ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರದ ಬಗ್ಗೆ ಆಂತರಿಕ ಸಮೀಕ್ಷೆಯನ್ನು ಕಂಡುಕೊಂಡಿದ್ದಾರೆ. ಮತದಾನ ನಡೆದ ಒಟ್ಟು 11 ಕ್ಷೇತ್ರಗಳ ಪೈಕಿ ಬಿಜೆಪಿ 7 ರಿಂದ 8 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿರಿಸಿಕೊಂಡಿದ್ದರೆ, ಕಾಂಗ್ರೆಸ್ 2 ರಿಂದ ಗರಿಷ್ಠ 3 ಸ್ಥಾನಗಳನ್ನು ಪಡೆದುಕೊಳ್ಳುವ ವಿಶ್ವಾಸದಲ್ಲಿದೆ. ಒಟ್ಟು 13 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಈ ಪೈಕಿ ಈಗಾಗಲೇ ವರ್ತಕರ ಮತ್ತು ಅಮರಪಡ್ನೂರು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಓರ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News