ಲಂಚದ ಉರುಳು: ದಿನಕರನ್ ಬಂಧನ

Update: 2017-04-26 03:31 GMT

ಹೊಸದಿಲ್ಲಿ, ಎ.26: ಎರಡೆಲೆ ಚಿಹ್ನೆಯನ್ನು ತಮ್ಮ ಬಣಕ್ಕೆ ಪಡೆಯುವ ಸಲುವಾಗಿ ಚುನಾವಣಾ ಆಯೋಗದ ಅಧಿಕಾರಿಗಳಿಗೇ ಲಂಚ ನೀಡಲು ಮುಂದಾದ ಪ್ರಕರಣದಲ್ಲಿ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ.ದಿನಕರನ್ ಹಾಗೂ ಆತನ ಸ್ನೇಹಿತ ಮಲ್ಲಿಕಾರ್ಜುನ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಸಂಪತ್ತು ಪ್ರಕರಣದಲ್ಲಿ ಜೈಲು ಶಿಕ್ಷೆಗೀಡಾಗಿರುವ ಶಶಿಕಲಾ ಅವರ ಅಳಿಯ ದಿನಕರನ್ ಐದು ದಿನಗಳ ಹಿಂದೆಯಷ್ಟೇ ಪಕ್ಷದ ಹುದ್ದೆಯಿಂದ ಕೆಳಕ್ಕಿಳಿದಿದ್ದರು. ಮಂಗಳವಾರ ರಾತ್ರಿ ಅವರನ್ನು ಬಂಧಿಸಲಾಗಿದೆ. ಜಯಲಲಿತಾ ಅವರ ನಿಧನದಿಂದ ತೆರವಾಗಿದ್ದ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಐಎಡಿಎಂಕೆಯ ತಮ್ಮ ಬಣಕ್ಕೆ ಎರಡೆಲೆ ಚಿಹ್ನೆ ಪಡೆಯುವ ಸಲುವಾಗಿ ಲಂಚ ನೀಡಿದ ಆರೋಪ ಇವರ ಮೇಲಿತ್ತು.

ಮಂಗಳವಾರ ಸುಧೀರ್ಘ ವಿಚಾರಣೆ ನಡೆಸಿದ ಬಳಿಕ ಇಬ್ಬರನ್ನೂ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಲಂಚ ಪ್ರಕರಣದ ಮಧ್ಯವರ್ತಿ ಸುಕೇಶ್ ಚಂದ್ರಶೇಖರ್ ಎಂಬಾತ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಶಶಿಕಲಾ ಹಾಗೂ ಪನ್ನೀರ್‌ ಸೆಲ್ವಂ ಬಣಗಳು ಎರಡೆಲೆ ಚಿಹ್ನೆ ಮೇಲೆ ಹಕ್ಕು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಆ ಚಿಹ್ನೆಯನ್ನು ರದ್ದುಪಡಿಸಿತ್ತು. ಎಪ್ರಿಲ್ 12ರಂದು ನಡೆಯಬೇಕಿದ್ದ ಆರ್.ಕೆ.ನಗರ ಉಪಚುನಾವಣೆಯನ್ನು ಮತದಾರರಿಗೆ ಲಂಚ ನೀಡುವ ಮೂಲಕ ಚುನಾವಣಾ ನಿಯಮಗಳ ವ್ಯಾಪಕ ಉಲ್ಲಂಘನೆಯಾಗುತ್ತಿದೆ ಎಂಬ ಕಾರಣ ನೀಡಿ ಚುನಾವಣಾ ಆಯೋಗ ಮುಂದೂಡಿತ್ತು. ದಿನಕರನ್, ಶಶಿಕಲಾ ಬಣದ ಅಭ್ಯರ್ಥಿಯಾಗಿದ್ದರು.

ಸುಕೇಶ್ ಅವರ ಜತೆ ಸಂಪರ್ಕ ಹೊಂದಿರುವುದನ್ನು ದಿನಕರನ್ ವಿಚಾರಣೆ ವೇಳೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ ದಿನಕರನ್ ಬಂಧನವಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಇಬ್ಬರ ನಡುವಿನ ಭೇಟಿಯ ವೀಡಿಯೊ ಹಾಗೂ ದೂರವಾಣಿ ಕರೆ ವಿವರಗಳು ಕೂಡಾ ಪೊಲೀಸರ ಬಳಿ ಇವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News