ಪೊಲೀಸರತ್ತ ಕಲ್ಲೆಸದ ಯುವತಿಗೆ ದೇಶಕ್ಕಾಗಿ ಫುಟ್ಬಾಲ್ ಆಡುವ ಆಸೆ!

Update: 2017-04-26 03:57 GMT

ಶ್ರೀನಗರ, ಎ.26: "ನಾನು ನಿನ್ನೆ ಪೊಲೀಸರತ್ತ ಕಲ್ಲೆಸೆದಿದ್ದೆ. ಆದರೆ ಹಾಗೆ ಮಾಡುವ ಉದ್ದೇಶ ನನಿಗಿರಲಿಲ್ಲ. ದೇಶಕ್ಕಾಗಿ ಫುಟ್ಬಾಲ್ ಆಡುವುದು ನನ್ನ ಬಯಕೆ"- ಕಾಶ್ಮೀರದ ಮೊಟ್ಟಮೊದಲ ಮಹಿಳಾ ಫುಟ್ಬಾಲ್ ಕೋಚ್ ಅಫ್ಸನ್ ಆಶಿಕ್ (21) ಅವರ ನೇರ ದಿಟ್ಟ ನುಡಿ ಇದು.

ಸರ್ಕಾರಿ ಮಹಿಳಾ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿನಿಯಾಗಿರುವ ಈಕೆ ಇತರ 20 ವಿದ್ಯಾರ್ಥಿನಿಯರ ಜತೆ ಫುಟ್ಬಾಲ್  ಮೈದಾನಕ್ಕೆ ಆಗಮಿಸುತ್ತಿದ್ದಾಗ, ಪ್ರತಾಪ್‌ ಪಾರ್ಕ್ ಬಳಿ ವಿದ್ಯಾರ್ಥಿಗಳ ಗುಂಪೊಂದು ಪೊಲೀಸರತ್ತ ಕಲ್ಲು ತೂರಾಡುತ್ತಿದ್ದುದು ಕಂಡುಬಂತು. ಪುಲ್ವಾನಾ ಪದವಿ ಕಾಲೇಜಿನಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಸಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು.

"ನಾನು ಜತೆಗಿದ್ದ ಸ್ನೇಹಿತೆಯರಿಗೆ ಆತಂಕಪಡಬೇಡಿ ಎಂದು ಧೈರ್ಯ ತುಂಬಿ, ಕಾದು ನೋಡೋಣ ಎಂದು ಹೇಳಿದೆ. ಒಬ್ಬ ಪೊಲೀಸ್ ನಮ್ಮ ಬಳಿಗೆ ಬಂದು ಒಬ್ಬ ವಿದ್ಯಾರ್ಥಿನಿಗೆ ಹೊಡೆದ. ಜತೆಗೆ ಆಕೆಯ ಹೆಸರು ಕೇಳಿದ. ಇದರಿಂದ ನಮಗೆ ಆವೇಶ ಬಂತು. ಆಕೆಯ ಪರವಾಗಿ ನಿಂತು ಪೊಲೀಸರನ್ನು ಎದುರಿಸಲು ಸಜ್ಜಾಗಿ ಆತನತ್ತ ಕಲ್ಲೆಸೆದೆವು" ಎಂದು ಘಟನೆಯನ್ನು ಅಫ್ಸಾನ್ ವಿವರಿಸಿದರು. ಆದರೆ ಸಹನೆಯಿಂದ ಇದ್ದ ಪೊಲೀಸರತ್ತ ವಿದ್ಯಾರ್ಥಿನಿಯರು ಕಲ್ಲೆಸದಿದ್ದಾಗಿ ಪೊಲೀಸರು ಹೇಳುತ್ತಿದ್ದಾರೆ.

ಪೊಲೀಸ್‌ನಿಂದ ಹಲ್ಲೆಗೊಳಲಾದ 16 ವರ್ಷದ ಬಾಲಕಿ ಕೂಡಾ ತಾನು ಪೊಲೀಸ್‌ಗೆ ಕಲ್ಲೆಸೆದಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಸೇನೆ, ಸಿಆರ್‌ಪಿಎಫ್ ಹಾಗೂ ಪೊಲೀಸರ ವಿರುದ್ಧ ನನಗೆ ಸಿಟ್ಟಿದೆ. ಸಿಆರ್‌ಪಿಎಫ್ ಸಿಬ್ಬಂದಿಯೊಬ್ಬ ಮಹಿಳೆಯನ್ನು ಅಮಾನುಷವಾಗಿ ಹೊಡೆಯುತ್ತಿರುವ ವೀಡಿಯೊ ನೋಡಿದ್ದೇನೆ. ಅವರಿಗೆ ಇನ್ನೂ ಕಲ್ಲು ಹೊಡೆಯಲು ನಾನು ಸಿದ್ಧ ಎಂದು ಆಕ್ರೋಶದಿಂದ ಬಾಲಕಿ ನುಡಿದಳು.

ಭದ್ರತಾ ಪಡೆಯ ದೌರ್ಜನ್ಯದಿಂದಾಗಿ ತಮ್ಮ ಸ್ವಾತಂತ್ರ್ಯಕ್ಕೆ ಹೇಗೆ ಧಕ್ಕೆಯಾಗುತ್ತಿದೆ ಎನ್ನುವುದನ್ನು ವಿದ್ಯಾರ್ಥಿನಿಯರು ವಿವರಿಸಿದರು.

"ನನ್ನ ಭವಿಷ್ಯ ಭಾರತದ ಜತೆಗಿದೆ ಎನ್ನುವುದು ಸ್ಪಷ್ಟ. ಕಲ್ಲೆಸೆಯುವವರ ಜತೆ ನಾನು ವಾದ ಮಾಡಿ, ಅದರ ಬದಲು ಮೈದಾನಕ್ಕೆ ಬಂದು ಫುಟ್ಬಾಲ್ ಆಡೋಣ ಎಂದು ಮನವೊಲಿಸಿದ್ದೇನೆ. ಕ್ರೀಡೆಯಿಂದ ಇದಕ್ಕೆ ಪರಿಹಾರ ಸಿಗಬಹುದು. ಐದು ವರ್ಷಗಳಿಂದ ಫುಟ್ಬಾಲ್ ತರಬೇತಿ ನೀಡುವ ನಾನು 30 ಬಾಲಕಿಯರನ್ನು ಸಜ್ಜುಗೊಳಿಸಿದ್ದೇನೆ. ಫುಟ್ಬಾಲ್ ರಾಷ್ಟ್ರೀಯ ತಂಡಕ್ಕಾಗಿ ಆಡುವುದು ನನ್ನ ಉದ್ದೇಶ" ಎಂದು ಅಫ್ಸಾನ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News