ಸಾಕ್ಷ್ಯವಿಲ್ಲದೆ 16 ವರ್ಷ ಜೈಲಿನಲ್ಲಿ ಕೊಳೆತ ಶಂಕಿತ ಭಯೋತ್ಪಾದಕ

Update: 2017-04-26 05:34 GMT

ಹೊಸದಿಲ್ಲಿ, ಎ.26: ಸಾಕ್ಷ್ಯವಿಲ್ಲದೇ ಇದ್ದರೂ ಕಳೆದ 16 ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದ ಶಂಕಿತ ಭಯೋತ್ಪಾದಕನಿಗೆ ಸುಪ್ರೀಂ ಕೋರ್ಟ್ ಮಂಗಳವಾರ ವಿಶೇಷ ಜಾಮೀನು ನೀಡಿದೆಯಲ್ಲದೆ ಪೊಲೀಸರಿಗೆ ಛೀಮಾರಿ ಹಾಕಿದೆ.

ಆರೋಪಿ ಶ್ರೀನಗರದ ಗುಲ್ಝಾರ್ ಅಹ್ಮದ್ ವಾನಿಯನ್ನು ಜುಲೈ 2001ರಲ್ಲಿ ಹಲವಾರು ಉಗ್ರ ದಾಳಿಗಳಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಲಾಗಿತ್ತು. ಕಳೆದ 16 ವರ್ಷಗಳಲ್ಲಿ ಆತನ ವಿರುದ್ಧ ದಿಲ್ಲಿ ಹಾಗೂ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ 11 ಪ್ರಕರಣಗಳ ಪೈಕಿ 10ರಲ್ಲಿ ಆತನನ್ನು ಖುಲಾಸೆಗೊಳಿಸಲಾಗಿತ್ತು. ಉಳಿದ ಇನ್ನೊಂದು ಪ್ರಕರಣದಲ್ಲಿ ಆತನ ಸಹ-ಆರೋಪಿಗೆ ಜಾಮೀನು ದೊರೆತಿದ್ದರೂ ವಾನಿ ವಿರುದ್ಧದ ಇನ್ನೊಂದು ಪ್ರಕರಣದಲ್ಲಿ ಉತ್ತರ ಪ್ರದೇಶದ ಪ್ರಾಸಿಕ್ಯೂಶನ್ ಒಟ್ಟು 96 ಸಾಕ್ಷಿಗಳ ಪೈಕಿ ಅರ್ಧದಷ್ಟು ಸಾಕ್ಷ್ಯಗಳ ವಿಚಾರಣೆಯನ್ನು ಇನ್ನೂ ಪೂರ್ತಿಗೊಳಿಸಿಲ್ಲ. ಈ ಪ್ರಕರಣ 2000ರಲ್ಲಿ ನಡೆದ ಸಾಬರಮತಿ ಎಕ್ಸ್‌ಪ್ರೆಸ್ ಸ್ಫೋಟಕ್ಕೆ ಸಂಬಂಧಿಸಿದ್ದಾಗಿದೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹಾಗೂ ಜಸ್ಟಿಸ್ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಪೊಲೀಸರಿಗೆ ಛೀಮಾರಿ ಹಾಕಿತಲ್ಲದೆ ‘‘ಪೊಲೀಸರು ಆರೋಪಿಗಳನ್ನು ಜೈಲಿನಲ್ಲಿರಿಸುತ್ತಾರೆ ಆದರೆ ಅವರ ವಿರುದ್ಧದ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವುದಿಲ್ಲ’’ ಎಂದು ಹೇಳಿತು.

‘‘ವಾನಿ ಪ್ರಕರಣದ ಎಲ್ಲಾ ಸಾಕ್ಷ್ಯಗಳನ್ನು ಅಕ್ಟೋಬರ್ 31ರೊಳಗಾಗಿ ವಿಚಾರಣೆ ಪೂರ್ತಿಗೊಳಿಸದೇ ಇದ್ದರೆ ಆತನನ್ನು ನವೆಂಬರ್ 1, 2017ರಂದು ವಿಚಾರಣಾ ನ್ಯಾಯಾಲಯದ ನಿಬಂಧನೆಗಳಿಗನುಗುಣವಾಗಿ ಬಿಡುಗಡೆಗೊಳಿಸಲಾಗುವುದು’’ ಎಂದು ನ್ಯಾಯಾಲಯ ಹೇಳಿತು.

ಆಗ್ರಾ ಸ್ಫೋಟ ಪ್ರಕರಣದ ಸಂಬಂಧ ವಾನಿಯನ್ನು ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ಖುಲಾಸೆಗೊಳಿಸಲಾಗಿತ್ತು. ಬಂಧಿತನಾಗುವಾಗ 28 ವರ್ಷದವನಾಗಿದ್ದ ವಾನಿಗೆ ಈಗ 44.

ವಾನಿ ಹಾಗೂ ಇತರ ಆರೋಪಿಗಳು ಸೆಕ್ಷನ್ 161ರ ಅನ್ವಯ ನೀಡಿದ್ದಾರೆನ್ನಲಾದ ತಪ್ಪೊಪ್ಪಿಗೆ ಹೇಳಿಕೆಯಾಧಾರದಲ್ಲಿ ಅವರನ್ನು 2001ರಲ್ಲಿ ಬಂಧಿಸಲಾಗಿತ್ತು. 2000ರ ಸ್ವಾತಂತ್ರ್ಯೋತ್ಸವದ ಮುನ್ನಾ ದಿನದಂದು ಉತ್ತರ ಪ್ರದೇಶದ ಹಲವು ನಗರಗಳು ಮತ್ತು ರೈಲುಗಳಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣಗಳ ಸಂಬಂಧ ಆತನ ಬಂಧನವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News