×
Ad

ಕೇಂದ್ರ, ಗುಜರಾತ್ ಸರ್ಕಾರಗಳ ವೆಬ್ ಸೈಟ್ ನಿಂದ ಆಧಾರ್ ಮಾಹಿತಿ ಬಹಿರಂಗ

Update: 2017-04-26 12:21 IST

ಹೊಸದಿಲ್ಲಿ, ಎ.26: ಸರಕಾರದ ಕನಿಷ್ಠ ಮೂರು ಯೋಜನೆಗಳ ಫಲಾನುಭವಿಗಳ ಆಧಾರ್ ಸಂಖ್ಯೆಯ ಮಾಹಿತಿ ಸಂಬಂಧಿತ ಇಲಾಖೆಗಳ ವೆಬ್ ಸೈಟ್ ಗಳಲ್ಲಿ ಸೋರಿಕೆಯಾದ ಬೆನ್ನಲ್ಲೇ ಮಂಗಳವಾರ ಇಂತಹ ಇನ್ನೂ ಎರಡು ಘಟನೆಗಳು ನಡೆದಿವೆ.

ಮೊದಲ ಪ್ರಕರಣದಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಆಧಾರ್ ಸಂಖ್ಯೆಗಳು ಕೇಂದ್ರ ಗೃಹ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯದ ವೆಬ್ ಸೈಟ್ ನಲ್ಲಿ ಲಭ್ಯವಿವೆ. ಎರಡನೇ ಪ್ರಕರಣದಲ್ಲಿ ಗುಜರಾತ್ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವೆಬ್ ಸೈಟ್ ನಲ್ಲಿ ನೂರಾರು ವಿದ್ಯಾರ್ಥಿಗಳ ಆಧಾರ್ ಸಂಖ್ಯೆಗಳು ಮತ್ತು ವಿಳಾಸಗಳು ಬಹಿರಂಗಗೊಂಡಿವೆ.

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ವೆಬ್ ಸೈಟ್ ನ ಸರ್ಚ್ ಆಯ್ಕೆಯಲ್ಲಿ ‘ಬೈ ಆಧಾರ್ ಐಡಿ’ ಅಡಿಯಲ್ಲಿ ಯಾವುದೇ ಸಂಖ್ಯೆ ಒತ್ತಿದರೂ ಹಲವಾರು ಫಲಾನುಭವಿಗಳ ಹೆಸರು, ತಂದೆಯ ಹೆಸರು, ನಗರದ ಹೆಸರು, ವಯಸ್ಸು, ಜಾತಿ ಮತ್ತು ಆಧಾರ್ ಸಂಖ್ಯೆಗಳು ಕಾಣಸಿಗುತ್ತವೆ. ಕೆಲವೊಂದು ಫಲಾನುಭವಿಗಳ ಫೋಟೋಗಳು ಕೂಡ ಕಾಣುತ್ತವೆ.

ಗುಜರಾತ್ ನಲ್ಲಿ 2013-14 ಅವಧಿಯಲ್ಲಿ ಒಟ್ಟು 32,979 ವಿದ್ಯಾರ್ಥಿಗಳು ಅಲ್ಪಸಂಖ್ಯಾತರಿಗಾಗಿನ ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿ ವೇತನ ಪಡೆದಿದ್ದು, ಇವರಲ್ಲಿ ಮೆರಿಟ್ ಸ್ಕಾಲರ್ ಶಿಪ್ ಪಡೆದ 2,607 ವಿದ್ಯಾರ್ಥಿಗಳ ಹೆಸರುಗಳು ಸಾಮಾಜಿಕ ನ್ಯಾಯ ಇಲಾಖೆಯ ವೆಬ್ ಸೈಟ್ ನಲ್ಲಿ ಕಾಣಬಹುದಾಗಿದೆ. ಅವರ ಎಲ್ಲಾ ಇತರ ಮಾಹಿತಿಗಳು, ಕಲಿಯುತ್ತಿರುವ ಸಂಸ್ಥೆ, ಬ್ಯಾಂಕ್ ಖಾತೆ ವಿವರಗಳನ್ನೂ ಕಾಣಬಹುದಾಗಿದೆ.

ಕಳೆದ ಕೆಲ ದಿನಗಳಲ್ಲಿ ಚಂಡೀಗಢದ ಪಿಡಿಎಸ್ ಫಲಾನುಭವಿಗಳ ಆಧಾರ್ ಸಂಖ್ಯೆ, ಸ್ವಚ್ಛ್ ಭಾರತ್ ಮಿಷನ್ನಿನ ಪ್ರಾವಿಡೆಂಟ್ ಫಂಡ್ ಫಲಾನುಭವಿಗಳು ಹಾಗೂ ಜಾರ್ಖಂಡ್ ಸರಕಾರದಿಂದ ಪಿಂಚಣಿ ಪಡೆಯುತ್ತಿರುವ ಲಕ್ಷಗಟ್ಟಲೆ ಜನರ ಮಾಹಿತಿಗಳು ಸೋರಿಕೆಯಾಗಿವೆ.

ಎಪ್ರಿಲ್ ತಿಂಗಳೊಂದರಲ್ಲಿಯೇ ಈ ರೀತಿಯಾಗಿ ಆಧಾರ್ ಮಾಹಿತಿ ಸೋರಿಕೆಯಾದ ಒಂಬತ್ತು ಪ್ರಕರಣಗಳು ವರದಿಯಾಗಿವೆ. ಪಂಜಾಬ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬಿಹಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಹಾತ್ಮ ಜ್ಯೋತಿಬಾ ಫುಲೆ ತೆಲಂಗಾಣ ಹಿಂದುಳಿದ ವರ್ಗಗಳ ಶಿಕ್ಷಣ ಸಂಸ್ಥೆಗಳ ಸೊಸೈಟಿ, ಕೇರಳ ವಿದ್ಯಾರ್ಥಿ ವೇತನ, ಖಾದಿ ಮತ್ತು ಗ್ರಾಮೋದ್ಯೋಗ ಮತ್ತು ಕೇರಳ ಸೇವ ಪಿಂಚಣಿ ಇವುಗಳ ವೆಬ್ ಸೈಟ್ ಗಳಲ್ಲಿ ಆಧಾರ್ ಮಾಹಿತಿ ಸೋರಿಕೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News