ವಲಸಿಗರಿಗೆ ಆಶ್ರಯ ನೀಡುವ ನಗರಗಳಿಗೆ ಫೆಡರಲ್ ನಿಧಿ ನಿರಾಕರಿಸುವ ಟ್ರಂಪ್ ಆದೇಶಕ್ಕೆ ನ್ಯಾಯಾಲಯ ತಡೆ
ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಎ. 26: ವಲಸಿಗರಿಗೆ ಆಶ್ರಯ ನೀಡಿರುವ ನಗರಗಳಿಗೆ ಫೆಡರಲ್ ನಿಧಿಗಳನ್ನು ನಿರಾಕರಿಸುವ ಬೆದರಿಕೆಯ ಮೂಲಕ, ಅವುಗಳು ವಲಸೆ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಲವಂತಪಡಿಸಲು ಸಾಧ್ಯವಿಲ್ಲ ಎಂದು ಫೆಡರಲ್ ನ್ಯಾಯಾಧೀಶರೊಬ್ಬರು ತೀರ್ಪು ನೀಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಕ್ಯಾಲಿಫೋರ್ನಿಯದ ನಾರ್ದರ್ನ್ ಡಿಸ್ಟ್ರಿಕ್ಟ್‌ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ವಿಲಿಯಮ್ ಒರಿಕ್ ಮಂಗಳವಾರ ಈ ಆದೇಶ ಹೊರಡಿಸಿದರು. ಟ್ರಂಪ್ ಜನವರಿ 25ರಂದು ಸಹಿ ಹಾಕಿದ ಸರಕಾರಿ ಆದೇಶವನ್ನು ಪ್ರಶ್ನಿಸಿ ಸ್ಯಾನ್ಸ್ ಫ್ರಾನ್ಸಿಸ್ಕೊ ಮತ್ತು ಸಾಂಟಾ ಕ್ಲಾರಾ ಕೌಂಟಿಗಳು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದವು.ಮೊಕದ್ದಮೆಗೆ ಸಂಬಂಧಿಸಿ ಎಪ್ರಿಲ್ 14ರಂದು 70 ನಿಮಿಷಗಳ ವಿಚಾರಣೆ ನಡೆದಿತ್ತು.
‘‘ನ್ಯಾಯಾಲಯದ ತೀರ್ಪು ನಮ್ಮ ದೇಶದ ಬಡವರ ಗೆಲುವಾಗಿದೆ. ಆಹಾರದ ಅಗತ್ಯವಿರುವ ಹಿರಿಯರು, ಆಶ್ರಯದ ಅಗತ್ಯವಿರುವ ಯುವಕರು ಹಾಗೂ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ಮಕ್ಕಳ ಗೆಲುವಾಗಿದೆ. ಹೊರಗಿನವರನ್ನು ಬರಮಾಡಿಕೊಳ್ಳುವ, ಸುರಕ್ಷಿತ ಹಾಗೂ ವೈವಿಧ್ಯ ಸಮುದಾಯವಾಗಿ ನಾವು ಮುಂದುವರಿಯುತ್ತೇವೆ’’ ಎಂದು ತೀರ್ಪಿನ ಬಳಿಕ ಸಾಂತಾ ಕ್ಲಾರಾ ಕೌಂಟಿಯ ಸೂಪರ್‌ವೈಸರ್ ಸಿಂಡಿ ಚವೇಝ್ ಹೇಳಿಕೆಯೊಂದರಲ್ಲಿ ತಿಳಿಸಿದರು.
ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಐದು ದಿನಗಳ ಬಳಿಕ ಈ ಸರಕಾರಿ ಆದೇಶಕ್ಕೆ ಸಹಿ ಹಾಕಿದ್ದರು.
ವಲಸಿಗರಿಗೆ ಆಶ್ರಯ ನೀಡುವ ಪ್ರದೇಶಗಳು ಕಾನೂನು ಅನುಷ್ಠಾನ ಉದ್ದೇಶಗಳಿಗೆ ಅಗತ್ಯ ಎಂದು ಭಾವಿಸುವ ಅನುದಾನವನ್ನು ಹೊರತುಪಡಿಸಿ ಇತರ ಫೆಡರಲ್ ಅನುದಾನಗಳನ್ನು ಪಡೆಯಲು ಅನರ್ಹ ಎಂಬುದಾಗಿ ಪರಿಗಣಿಸುವಂತೆ ಅಟಾರ್ನಿ ಜನರಲ್ ಮತ್ತು ಆಂತರಿಕ ಭದ್ರತೆ ಕಾರ್ಯದರ್ಶಿಗಳಿಗೆ ಆದೇಶವು ನಿರ್ದೇಶನ ನೀಡುತ್ತದೆ.
ಈ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಫೆಡರಲ್ ನ್ಯಾಯಾಲಯದಲ್ಲಿ ಫೆಬ್ರವರಿ 3ರಂದು ಮೊಕದ್ದಮೆ ಹೂಡಲಾಗಿತ್ತು.