ಪುಂಡರನ್ನು ಬಂಧಿಸಬೇಡಿ, ಪೋಷಕರನ್ನು ಠಾಣೆಗೆ ಕರೆಸಿ: ಉ.ಪ್ರದೇಶ ಡಿಜಿಪಿ ಸೂಚನೆ

Update: 2017-04-26 13:53 GMT

ಲಕ್ನೊ, ಎ.26: ರೌಡಿ ವರ್ತನೆ ತೋರಿದವರನ್ನು ಬಂಧಿಸುವ ಅಗತ್ಯವಿಲ್ಲ. ಅವರ ಪೋಷಕರನ್ನು ಠಾಣೆಗೆ ಕರೆಸಿ ಅವರಿಗೆ ಈ ಬಗ್ಗೆ ತಿಳಿಸಬೇಕು ಎಂದು ಉತ್ತರ ಪ್ರದೇಶದ ನೂತನ ಡಿಜಿಪಿ ಸುಲ್ಖಾನ್ ಸಿಂಗ್ ಸೂಚಿಸಿದ್ದಾರೆ. ಅಲ್ಲದೆ ‘ಆ್ಯಂಟಿ ರೋಮಿಯೊ’ ಪಡೆಯ ಕುರಿತು ಏನು ಮಾಡಬೇಕು, ಏನು ಮಾಡಬಾರದು ಎಂಬ ವಿವರಣೆಯನ್ನು ಪೊಲೀಸರಿಗೆ ನೀಡಿದ್ದಾರೆ.

 ಅರಾಜಕತೆ ಸೃಷ್ಟಿಸಲು ಯತ್ನಿಸುವವರ ಹಾಗೂ ಗೋರಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು. ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸುಲ್ಖಾನ್ ಸಿಂಗ್, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಸೂಕ್ತ ನಿರ್ದೇಶನಗಳನ್ನು ನೀಡಿದರು.

 ಪ್ರತಿಭಟನೆ ವ್ಯಕ್ತಪಡಿಸುವ ಹೊಸ ಪದ್ದತಿಯನ್ನು ಆರಂಭಿಸದಂತೆ, ಯಾವುದೇ ಕಾರಣಕ್ಕೂ ಪ್ರತಿಭಟನಾಕಾರರು ರಸ್ತೆ ತಡೆ ನಡೆಸದಂತೆ ತಡೆಯಬೇಕು . ಅಲ್ಲದೆ ಸಾರ್ವಜನಿಕರೊಂದಿಗೆ ಸಭ್ಯ ರೀತಿಯಲ್ಲಿ ವರ್ತಿಸಬೇಕು, ರಸ್ತೆಗಳನ್ನು ಅತಿಕ್ರಮಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಸಾರಿಗೆ ವ್ಯವಸ್ಥೆಯ ಕಾನೂನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಪೊಲೀಸರಿಗೆ ಸೂಚಿಸಿದರು.

   ಆ್ಯಂಟಿ ರೋಮಿಯೊ ಪಡೆಯ ವಿರುದ್ಧ ಏನು ಮಾಡಬೇಕು, ಏನನ್ನು ಮಾಡಬಾರದು ಎಂಬ ಬಗ್ಗೆ ವಿವರವಾದ ಸ್ಥಾಯಿ ಆದೇಶವನ್ನು ಸಿದ್ದಪಡಿಸುವಂತೆ ಎಲ್ಲಾ ಎಸ್‌ಎಸ್‌ಪಿ, ಎಸ್‌ಪಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಆ್ಯಂಟಿ ರೋಮಿಯೊ ಪಡೆಯವರು ರೌಡಿಗಳ ವಿರುದ್ಧ ಮಾತ್ರ ಕಾರ್ಯಾಚರಿಸಬೇಕು. ಆದರೆ ಯಾವುದೇ ವಿಷಯದ ಬಗ್ಗೆ ತನಿಖೆ ನಡೆಸಬಾರದು . ಅಲ್ಲದೆ ತಮ್ಮ ಕಾರ್ಯವನ್ನು ದಾಖಲಿಸಿಕೊಳ್ಳುವಂತೆ ಅವರಿಗೆ ಸ್ಪಷ್ಟವಾಗಿ ತಿಳಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.

 ಮಹಿಳೆಯರನ್ನು ಛೇಡಿಸುವವರ ವಿರುದ್ಧ ಕಾರ್ಯಾಚರಣೆಗೆ ಉತ್ತರ ಪ್ರದೇಶ ಸರಕಾರ ರಚಿಸಿರುವ ಆ್ಯಂಟಿ ರೋಮಿಯೋ ಪಡೆ ಅಮಾಯಕ ದಂಪತಿಗಳನ್ನು ಪೀಡಿಸಿದ ಹಲವು ಘಟನೆಗಳು ನಡೆದಿವೆ ಎಂಬ ದೂರು ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News