×
Ad

ಆಲ್ವಾರ್‌ನಲ್ಲಿ ಹೈನು ಕೃಷಿಕನ ಹತ್ಯೆ ಪ್ರಕರಣ: ಕೊನೆಗೂ ಮೌನ ಮುರಿದ ವಸುಂಧರಾ ರಾಜೆ

Update: 2017-04-26 20:01 IST

ಜೈಪುರ,ಎ.26: ಆಲ್ವಾರ್‌ನಲ್ಲಿ ಅಕ್ರಮ ಗೋ ಸಾಗಾಣಿಕೆಯ ಆರೋಪದಲ್ಲಿ ಹರ್ಯಾಣದ ಹೈನುಗಾರಿಕೆ ಕೃಷಿಕ ಪಹ್ಲು ಖಾನ್(55) ಹತ್ಯೆ ನಡೆದ ಮೂರು ವಾರಗಳ ಬಳಿಕ ಕೊನೆಗೂ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಮೌನ ಮುರಿದಿದ್ದಾರೆ. ಈ ಅಮಾನುಷ ಕೃತ್ಯವನ್ನು ಖಂಡಿಸಿ ಕೆಲವೇ ದಿನಗಳ ಹಿಂದೆ ನಿವೃತ್ತ ಅಧಿಕಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ರಾಜೆಯವರಿಗೆ ತೀಕ್ಷ್ಣವಾದ ಪತ್ರವನ್ನು ಬರೆದಿದ್ದರು. ಎ.1ರಂದು ಖಾನ್ ಮೇಲೆ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣರಾಗಿದ್ದ ಗೋರಕ್ಷಕರಿಗೆ ರಾಜೆ ಎಚ್ಚರಿಕೆ ನೀಡಿದ್ದು, ಪ್ರಕರಣ ಕುರಿತಂತೆ ಇದು ರಾಜ್ಯ ಸರಕಾರದ ಪ್ರಥಮ ಪ್ರತಿಕ್ರಿಯೆಯಾಗಿದೆ. ಇದಕ್ಕೂ ಮುನ್ನ ಸಚಿವ ಗುಲಾಬಚಂದ್ ಕಟಾರಿಯಾ ಅವರು, ಇದೊಂದು ‘ಹಲ್ಲೆ ಪ್ರಕರಣ’ಎಂದು ಬಣ್ಣಿಸಿದ್ದರು.

ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕೆಲವರನ್ನು ಬಂಧಿಸಲಾಗಿದೆ. ಇಂತಹ ಚಟುವಟಿಕೆಗಳನ್ನು ರಾಜಸ್ಥಾನದಲ್ಲಿ ಸಹಿಸಲಾಗುವುದಿಲ್ಲ ಎಂದು ತಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ರಾಜೆ ಹೇಳಿದರು. ಖಾನ್ ಕೊಲೆ ಪ್ರಕರಣದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಆದರೆ ಆರನೇ ವ್ಯಕ್ತಿಯನ್ನು ಇನ್ನೂ ಬಂಧಿಸಬೇಕಾಗಿದೆ ಎಂದು ಪ್ರತಿಭಟನಾ ನಿರತ ಸಾಮಾಜಿಕ ಕಾರ್ಯಕರ್ತರು ಪ್ರತಿಪಾದಿಸಿದ್ದಾರೆ.

 ವಜಾಹತ್ ಹಬೀಬುಲ್ಲಾ, ಅರುಣಾ ರಾಯ್ ಮತ್ತು ಹರ್ಷ ಮಂದರ್ ಸೇರಿದಂತೆ ಮಾಜಿ ಅಧಿಕಾರಿಗಳು ರವಿವಾರ ರಾಜ್ಯ ಸರಕಾರಕ್ಕೆ ಕಟುವಾದ ಪತ್ರವೊಂದನ್ನು ಬರೆದು, ಪೊಲೀಸರ ನಿಧಾನ ಗತಿಯ ಕ್ರಮ ಮತ್ತು ರಾಜ್ಯ ಸರಕಾರದ ನಿರ್ಲಕ್ಷದ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News