25ನೆ ವರ್ಷಕ್ಕೇ ನಿವೃತ್ತಿಯಾದ ಇಂಗ್ಲೆಂಡ್‌ನ ಪ್ರತಿಭಾವಂತ ಆಲ್‌ರೌಂಡರ್ ಝಫರ್ ಅನ್ಸಾರಿ : ಕಾರಣವೇನು ಗೊತ್ತೇ?
ಲಂಡನ್,ಎ.26: ಇಂಗ್ಲೆಂಡ್‌ನ ಆಲ್‌ರೌಂಡರ್ ಝಫರ್ ಅನ್ಸಾರಿ ತನ್ನ 25ನೆ ವಯಸ್ಸಿನಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದಿಢೀರನೆ ನಿವೃತ್ತಿ ಘೋಷಿಸಿದ್ದಾರೆ.
ಆರು ತಿಂಗಳ ಹಿಂದೆಯಷ್ಟೇ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆಗೈದಿರುವ ಝಫರ್ ಇಂಗ್ಲೆಂಡ್‌ನ ಪರ 3 ಟೆಸ್ಟ್, 1 ಏಕದಿನ ಪಂದ್ಯವನ್ನು ಆಡಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ದರು. 2015ರಲ್ಲಿ ಐರ್ಲೆಂಡ್‌ನ ವಿರುದ್ಧ ಏಕೈಕ ಏಕದಿನ ಪಂದ್ಯ ಆಡಿದ್ದರು. ಈ ವರ್ಷ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ತಂಡದಲ್ಲಿದ್ದ 25ರ ಹರೆಯದ ಝಫರ್ ಎರಡು ಪಂದ್ಯಗಳನ್ನು ಆಡಿದ್ದರು. ಎಡಗೈ ಸ್ಪಿನ್ ಬೌಲರ್ ಆಗಿದ್ದ ಅವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರು.
‘‘ಏಳು ವರ್ಷಗಳ ಕಾಲ ವೃತ್ತಿಪರ ಕ್ರಿಕೆಟಿಗನಾಗಿ ಹಾಗೂ ಸುಮಾರು 17 ವರ್ಷಗಳ ಕಾಲ ಕ್ಲಬ್ ಕ್ರಿಕೆಟ್ ಪಂದ್ಯವನ್ನು ಆಡಿರುವ ತಾನು ಇದೀಗ ನಿವೃತ್ತಿಯಾಗಲು ಬಯಸಿದ್ದೇನೆ. ಈ ನಿರ್ಧಾರ ಅತ್ಯಂತ ಕಠಿಣವಾಗಿತ್ತು. ತಾನು 8ರ ಹರೆಯದಲ್ಲಿ ಸರ್ರೆ ಕ್ರಿಕೆಟ್ ಕ್ಲಬ್‌ನ ಪರವಾಗಿ ಆಡಲು ಆರಂಭಿಸಿದ್ದೆ. ಸರ್ರೆ ಕ್ರಿಕೆಟ್ ಕ್ಲಬ್ ತನ್ನ ಜೀವನದಲ್ಲಿ ಪ್ರಮುಖ ಪಾತ್ರವಹಿಸಿತ್ತು. ಸರ್ರೆ ಕ್ಲಬ್ ನನಗೆ ಸಂಪೂರ್ಣ ಬೆಂಬಲಿಸಿತ್ತು. 17 ವರ್ಷಗಳ ಕಾಲ ತನಗೆ ಬೆಂಬಲ ಹಾಗೂ ಉತ್ತೇಜನ ನೀಡಿರುವ ಕ್ಲಬ್, ಅಭಿಮಾನಿಗಳಿಗೆ ತಾನು ಕೃತಜ್ಞತೆ ಸಲ್ಲಿಸುವೆ’’ ಎಂದು ಅನ್ಸಾರಿ ಹೇಳಿದ್ದಾರೆ.
‘‘ಕ್ರಿಕೆಟ್ ಜೀವನದ ಒಂದು ಭಾಗವಷ್ಟೇ ನಾನು ನಂಬಿದ್ದೆ. ಅದುವೇ ಸರ್ವಸ್ವವೆಂದು ಭಾವಿಸಿರಲಿಲ್ಲ. ನನ್ನ ಮುಂದೆ ಇತರ ಗುರಿಗಳಿವೆ. ಅದನ್ನು ಈಡೇರಿಸಿಕೊಳ್ಳಬೇಕಾಗಿದೆ. ಹಾಗಾಗಿ ಹೊಸ ಇನಿಂಗ್ಸ್ ಆರಂಭಿಸಲು ನಿರ್ಧರಿಸಿದ್ದೇನೆ. ನಾನು ಕಾನೂನು ವಿಭಾಗದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಇದೀಗಲೇ ಪ್ರಯತ್ನ ಆರಂಭಿಸಿರುವೆ’’ ಎಂದು ಅನ್ಸಾರಿ ಹೇಳಿದ್ದಾರೆ.
8ರ ಹರೆಯದಲ್ಲಿ ಸರ್ರೆ ಪರ ಆಡಲು ಆರಂಭಿಸಿದ್ದ ಅನ್ಸಾರಿ ಕ್ಲಬ್‌ನ ವಿವಿಧ ವಯೋಮಿತಿಯ ವಿಭಾಗದಲ್ಲಿ ಆಡಿದ್ದರು. ಕ್ರಿಕೆಟ್ ಜೊತೆಗೆ ಕೆಂಬ್ರಿಡ್ಜ್ ಯುನಿವರ್ಸಿಟಿಯಲ್ಲಿ ಶಿಕ್ಷಣವನ್ನು ಮುಂದುವರಿಸಿದ್ದ ಅನ್ಸಾರಿ 2013ರಲ್ಲಿ ಪೊಲಿಟಿಕ್ಸ್, ಫಿಲಾಸಫಿ ಹಾಗೂ ಸೋಶಿಯಾಲಜಿಯಲ್ಲಿ ಡಬಲ್ ಫಸ್ಟ್‌ನಲ್ಲಿ ಪದವಿ ಪೂರೈಸಿದ್ದರು. 2016ರಲ್ಲಿ ಲಂಡನ್ ಯುನಿವರ್ಸಿಟಿಯಲ್ಲಿ ಇತಿಹಾಸದಲ್ಲಿ ಮಾಸ್ಟರ್ಸ್‌ನ್ನು ಡಿಸ್ಟಿಂಕ್ಸನ್‌ನಲ್ಲಿ ಪೂರ್ಣಗೊಳಿಸಿದ್ದ ಅನ್ಸಾರಿ ಸರ್ರೆ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವುದನ್ನು ಮುಂದುವರಿಸಿದ್ದರು.
ಅನ್ಸಾರಿ ಪ್ರಥಮ ದರ್ಜೆ ಪಂದ್ಯದಲ್ಲಿ ಮೂರು ಶತಕ ಬಾರಿಸಿದ್ದರು ಹಾಗೂ ಆರು ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದ್ದರು. ಕಿರಿಯ ವಯಸ್ಸಿನಲ್ಲಿ ಉನ್ನತ ಮಟ್ಟದಲ್ಲಿ ಮಿಂಚಿರುವ ಅನ್ಸಾರಿ ಸರ್ರೆಯಲ್ಲಿ ಅಕಾಡೆಮಿ ರ್ಯಾಂಕ್ ಪಡೆದಿದ್ದರು.