×
Ad

ಸಿಆರ್‌ಪಿಎಫ್‌ನ ನೂತನ ಡಿಜಿಯಾಗಿ ರಾಜೀವ್ ರಾಯ್ ಭಟ್ನಾಗರ್ ನೇಮಕ

Update: 2017-04-26 21:02 IST

ಹೊಸದಿಲ್ಲಿ,ಎ.26: ಹಿರಿಯ ಐಪಿಎಸ್ ಅಧಿಕಾರಿ ರಾಜೀವ್ ರಾಯ್ ಭಟ್ನಾಗರ್ ಅವರನ್ನು ಸಿಆರ್‌ಪಿಎಫ್‌ನ ನೂತನ ಮಹಾ ನಿರ್ದೇಶಕರನ್ನಾಗಿ ಬುಧವಾರ ನೇಮಕಗೊಳಿಸಲಾಗಿದೆ. ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರಿಂದ 25 ಸಿಆರ್‌ಪಿಎಫ್ ಯೋಧರ ಮಾರಣಹೋಮ ನಡೆದ ಎರಡು ದಿನಗಳ ಬಳಿಕ ಈ ನೇಮಕವಾಗಿದೆ. ಸುದೀಪ್ ಲಖ್ತಾಕಿಯಾ ಅವರು ಹಾಲಿ ಸಿಆರ್‌ಪಿಎಫ್‌ನ ಪ್ರಭಾರಿ ಡಿಜಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಭಟ್ನಾಗರ್ ಪ್ರಸ್ತುತ ಮಾದಕ ದ್ರವ್ಯ ನಿಯಂತ್ರಣ ಘಟಕದ ಡಿಜಿಯಾಗಿದ್ದು, 1983ರ ಐಪಿಎಸ್ ತಂಡಕ್ಕೆ ಸೇರಿದ್ದಾರೆ.

ಇನ್ನೊಂದು ಪ್ರಮುಖ ಬೆಳವಣಿಗೆಯಲ್ಲಿ ಎನ್‌ಡಿಆರ್‌ಎಫ್‌ನ ಡಿಜಿಯಾಗಿರುವ ಆರ್.ಕೆ.ಪಚ್ನಾಡ್ ಅವರನ್ನು ಐಟಿಬಿಪಿಯ ಡಿಜಿಯನ್ನಾಗಿ ನೇಮಕಗೊಳಿಸಲಾಗಿದೆ. ಹಾಲಿ ಈ ಹುದ್ದೆಯಲ್ಲಿರುವ ಕೃಷ್ಣ ಚೌಧರಿ ಅವರು ಈ ವರ್ಷದ ಜೂನ್‌ನಲ್ಲಿ ನಿವೃತ್ತರಾಗಲಿದ್ದಾರೆ. ಪಚ್ನಾಡ್ ಅವರು ಪ.ಬಂಗಾಲ ಕೇಡರ್‌ನ 1983ನೇ ಐಪಿಎಸ್ ತಂಡಕ್ಕೆ ಸೇರಿದ್ದಾರೆ.

ಸುಕ್ಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಕ್ಸಲರ ದಾಳಿಯ ಹಿನ್ನೆಲೆಯಲ್ಲಿ ಈ ನೇಮಕಗಳು ನಡೆದಿವೆ.

ವಿಶ್ವದಲ್ಲಿ ಅತ್ಯಂತ ದೊಡ್ಡ ಅರೆ ಮಿಲಿಟರಿ ಪಡೆಯಾಗಿರುವ ಸಿಆರ್‌ಪಿಫ್‌ನ ಡಿಜಿಯಾಗಿದ್ದ ಕೆ.ದುರ್ಗಾಪ್ರಸಾದ್ ಅವರು ಫೆ.28ರಂದು ನಿವೃತ್ತಿಗೊಂಡ ಬಳಿಕ ಅದು ಮುಖ್ಯಸ್ಥನಿಲ್ಲದೆ ಕಾರ್ಯ ನಿರ್ವಹಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News