ಸೀತಾನದಿಗೆ ವಾರಾಹಿ ನೀರು: ಯೋಜನೆ ಜಾರಿಗೆ ಆಗ್ರಹ

Update: 2017-04-26 18:33 GMT

ಉಡುಪಿ, ಎ.26: ಬತ್ತಿ ಹೋಗಿರುವ ಸೀತಾನದಿಗೆ ವಾರಾಹಿ ನೀರು ಹರಿಸುವ ಯೋಜನೆಯನ್ನು ಶೀಘ್ರವೇ ಜಾರಿಗೆ ತರುವಂತೆ ಬುಧವಾರ ನಡೆದ ಉಡುಪಿ ತಾಪಂ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಲಾಯಿತು.

ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಭುಜಂಗ ಶೆಟ್ಟಿ, ಸದ್ಯ ಸೀತಾನದಿಯಲ್ಲಿ ಒಂದು ತೊಟ್ಟು ನೀರಿಲ್ಲ. ಇದರಿಂದ ಸುತ್ತಲಿನ ಸಾವಿರಾರು ಎಕರೆ ಅಡಿಕೆ ತೋಟ ಒಣಗಿ ಹೋಗಿದೆ. ಈ ಯೋಜನೆ ಜಾರಿಗೆ ತಂದರೆ ಈ ಪರಿಸರ ಮಾತ್ರ ಅಲ್ಲ ಉಡುಪಿ ನಗರಕ್ಕೂ ನೀರು ಪೂರೈಕೆ ಮಾಡಲು ಅನುಕೂಲವಾಗುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ಈಗಾಗಲೇ ಈ ಕುರಿತು ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಪಂ ಸಭೆ ಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಭೂಸ್ವಾಧೀನ ಮಾಡುವ ಬಗ್ಗೆ ಎಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಏಲಂ ತಡೆಯಾಜ್ಞೆಗೆ ಆಕ್ಷೇಪ: ಬೊಮ್ಮರಬೆಟ್ಟು ಗ್ರಾಪಂ ಸರ್ವಾನುಮತದಿಂದ ತೆಗೆದುಕೊಂಡ ನಿರ್ಣಯದಂತೆ, ಮಾಡಿರುವ ವಾಣಿಜ್ಯ ಕಟ್ಟಡದ ಕೋಣೆಗಳ ಏಲಂಗೆ ತಾಪಂ ಅಧ್ಯಕ್ಷರು ಏಕಾಏಕಿ ತಡೆಯಾಜ್ಞೆ ನೀಡಿ ರುವುದಕ್ಕೆ ವಿಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.

 ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯ ದೃಷ್ಟಿ ಯಿಂದ ನಾನು ತಡೆಯಾಜ್ಞೆ ನೀಡಿದ್ದೇನೆ. ಇದೀಗ ಈ ಪ್ರಕರಣ ಕೋರ್ಟ್‌ನಲ್ಲಿದ್ದು, ಈ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದು ಹೇಳಿದರು. ಇದರಿಂದ ಆಕ್ರೋ ಶಗೊಂಡ ವಿಪಕ್ಷ ಸದಸ್ಯರು ಅಧ್ಯಕ್ಷರ ವಿರುದ್ಧ ಹರಿ ಹಾಯ್ದರು.

ಉಳಿಕೆ ಹಣ ವಾಪಸ್: ಬಳಕೆ ಮಾಡದ 13ನೆ ಹಣ ಕಾಸು ಆಯೋಗದ ಉಳಿಕೆ ಹಣವು ಬಡ್ಡಿ ಸಮೇತವಾಗಿ ಜಿಪಂನಿಂದ 4,77,72,830ರೂ., ತಾಪಂನಿಂದ 11,61,249 ರೂ. ಹಾಗೂ ಗ್ರಾಪಂಗಳಿಂದ 1,12,48,353 ರೂ. ಸರಕಾರಕ್ಕೆ ವಾಪಸ್ ಹೋಗಿದೆ. ಸರಕಾರ ನೀಡಿದ ಹಣ ಸರಿಯಾಗಿ ಬಳಕೆ ಮಾಡದಿದ್ದರೆ ಹೇಗೆ ಎಂದು ಸದಸ್ಯ ಸುಧೀರ್ ಕುಮಾರ್ ಶೆಟ್ಟಿ ಪ್ರಶ್ನಿಸಿದರು. ಉಡುಪಿ ತಾಪಂನಿಂದ ಹೆಚ್ಚು ಹಣ ಉಳಿಕೆಯಾಗಿಲ್ಲ. ಕೇವಲ ಬಡ್ಡಿಯ ಹಣ 3 ಲಕ್ಷ ರೂ. ಮಾತ್ರ ಸರಕಾರಕ್ಕೆ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬ್ರಹ್ಮಾವರ ಹಾಗೂ ಕಲ್ಯಾಣಪುರ ಮೆಸ್ಕಾಂನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಲೈನ್‌ಮೆನ್‌ಗಳಿಲ್ಲ ಎಂದು ಸದಸ್ಯರು ದೂರಿದರು. ಇದಕ್ಕೆ ಉತ್ತರಿ ಸಿದ ಮೆಸ್ಕಾಂ ಅಧಿಕಾರಿ, ಬೇಸಿಗೆಯಲ್ಲಿ ದೂರುಗಳು ಕಡಿಮೆ ಬರುವುದರಿಂದ ಕೇವಲ ಒಬ್ಬರನ್ನು ಮಾತ್ರ ರಾತ್ರಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಮಳೆಗಾಲದಲ್ಲಿ 2-3 ಮಂದಿಯನ್ನು ನಿಯೋಜಿಸಲಾಗುತ್ತದೆ ಎಂದರು. ಸಿಬ್ಬಂದಿ ನೇಮಕಕ್ಕೆ ನಿರ್ಣಯ: ಉಡುಪಿ ತಾಪಂ ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಅನು ದಾನದ ಕೊರತೆಯ ಬಗ್ಗೆ ನಿರ್ಣಯ ಮಾಡಿ ಸಂಬಂಧಪಟ್ಟವರಿಗೆ ಕಳುಹಿಸುವಂತೆ ದಿನಕರ ಹೇರೂರು ಸಭೆಯಲ್ಲಿ ಆಗ್ರಹಿಸಿದರು. ಈಗಾಗಲೇ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಈ ಬಗ್ಗೆ ಮನವರಿಕೆ ಮಾಡಲಾಗಿದೆ. ಅಲ್ಲದೆ ಸಭೆಯಲ್ಲಿ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.

ವಡ್ಡರ್ಸೆ ಗ್ರಾಪಂನಲ್ಲಿ ಪಿಡಿಒ, ಗ್ರಾಮ ಲೆಕ್ಕಿಗರಿಲ್ಲದೆ ಗ್ರಾಮ ಸಭೆ ಕೂಡ ರದ್ದಾಗಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ. ಗ್ರಾಮಸ್ಥರಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿರುವ ಅಧ್ಯಕ್ಷರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಗ್ರಾಪಂ ಸಿಬ್ಬಂದಿ ಕೊರತೆಯನ್ನು ವಿರೋಧಿಸಿ ಸ್ಥಳೀಯರು ಮೇ 5ರಂದು ಪಂಚಾಯತ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ಸದಸ್ಯ ಗುಂಡು ಶೆಟ್ಟಿ ತಿಳಿಸಿದರು. ಸದ್ಯದಲ್ಲೇ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಮುಂದಿನ ಒಂದು ವರ್ಷಗಳ ಅವಧಿಗೆ ತಾಪಂನ ನಾಮನಿರ್ದೇಶನ ಸದಸ್ಯರಾಗಿ ಬಡಾನಿಡಿಯೂರು, ಹೆಗ್ಗುಂಜೆ, ಪಡುಬಿದ್ರೆ, ಬೆಳ್ಳೆ, ಕೊಡಿಬೆಟ್ಟು, ಕೋಟ, ಬೆಳಪು, ನಾಲ್ಕೂರು, ಬಿಲ್ಲಾಡಿ, ಸಾಸ್ತಾನ, ಕೋಟ(ಪ.ಜಾತಿ), ಕೊಕ್ಕರ್ಣೆ(ಪ.ಪಂಗಡ) ಗ್ರಾಪಂ ಗಳ ಅಧ್ಯಕ್ಷರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ತರಬೇತಿ ಪಡೆದ ಹಿಂದುಳಿದ ವರ್ಗದ ಯುವತಿಯರಿಗೆ ಹೊಲಿಗೆ ಯಂತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸ್ಥಾಯಿ ಸಮಿತಿಯ ಅಧ್ಯಕ್ಷೆ ನೀತಾ ಗುರುರಾಜ್, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸರ್ವೋತ್ತಮ ಉಡುಪ, ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಉಪಸ್ಥಿತರಿದ್ದರು.

ಟ್ಯಾಂಕರ್ ನೀರು ಪೂರೈಕೆಗೆ ಸೂಚನೆ

ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಅಗತ್ಯವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಪಿಡಿಓಗಳಿಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಮಹೇಶ್ಚಂದ್ರ ತಿಳಿಸಿದರು.

ಕಟಪಾಡಿ ಪರಿಸರದ ರಸ್ತೆ ಬದಿಯಲ್ಲಿರುವ ಮನೆಗಳಿಗೆ ಮಾತ್ರ ಟ್ಯಾಂಕರ್ ನೀರು ಸರಬರಾಜು ಮಾಡ ಲಾಗುತ್ತದೆ. ಕೆಲವು ಕಡೆ ಟ್ಯಾಂಕರ್ ಹೋಗಲು ಸಾಧ್ಯವಾಗದ ಮನೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಆದು ದರಿಂದ ಬಹುಗ್ರಾಮ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಸದಸ್ಯ ನಾಗೇಶ್ ಪೂಜಾರಿ ಸಭೆಯಲ್ಲಿ ಆಗ್ರಹಿಸಿದರು. ಟ್ಯಾಂಕರ್ ಹೋಗದ ಪ್ರದೇಶಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು ಎಂದು ತಹಶೀಲ್ದಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News