ಗೋರಕ್ಷಕರಿಂದ ಹತ್ಯೆಗೀಡಾದ ಪೆಹ್ಲೂಖಾನ್ ದನಗಳ್ಳ ಅಲ್ಲ: ಗೃಹಸಚಿವರ ಆರೋಪವನ್ನು ನಿರಾಕರಿಸಿದ ವರದಿ

Update: 2017-04-27 03:46 GMT

ಜೈಪುರ, ಎ.27: ಅಲ್ವಾರ್‌ನಲ್ಲಿ ಗೋರಕ್ಷಕರಿಂದ ಹತ್ಯೆಗೀಡಾದ ಪೆಹ್ಲೂಖಾನ್ ದನಗಳ್ಳ ಅಲ್ಲ ಎನ್ನುವುದು ಹಿಂದೂಸ್ತಾನ್ ಟೈಮ್ಸ್‌ನ ತನಿಖಾ ವರದಿಯಿಂದ ದೃಢಪಟ್ಟಿದೆ.

ಗೃಹಸಚಿವ ಗುಲಾಬ್‌ಚಂದ್ ಕಠಾರಿಯಾ ಸೋಮವಾರ ವಿಧಾನಸಭೆಯಲ್ಲಿ ಹೇಳಿಕೆ ನೀಡಿ, ಪೆಹ್ಲೂಖಾನ್ ದನಗಳ್ಳರ ಕುಟುಂಬಕ್ಕೆ ಸೇರಿದ ವ್ಯಕ್ತಿ. ಆತನ ಮಗನ ವಿರುದ್ಧ ಎರಡು ದನಗಳ್ಳತನ ಆರೋಪಗಳಿದ್ದವು ಎಂದು ಪ್ರಕರಣಗಳನ್ನು ಉಲ್ಲೇಖಿಸಿದ್ದರು. ಆದರೆ ಈ ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯ, ಪೆಹ್ಲೂಖಾನ್ ಅವರ ಮಗ ಇರ್ಷಾದ್ ನಿರ್ದೋಷಿ ಎಂದು ತೀರ್ಪು ನೀಡಿರುವುದು ಇದೀಗ ಬಹಿರಂಗವಾಗಿದೆ. ಮೊದಲ ಪ್ರಕರಣವನ್ನು ನುಹ್ ಠಾಣೆಯಲ್ಲಿ ಹಾಗೂ ಎರಡನೇ ಪ್ರಕರಣವನ್ನು ಹರ್ಯಾಣದಲ್ಲಿ 2011ರಲ್ಲಿ ದಾಖಲಿಸಲಾಗಿತ್ತು.

ಆದರೆ ಈ ಪ್ರಕರಣಗಳು ವಾಸ್ತವವಾಗಿ ಪ್ರಾಣಿಗಳ ವಿರುದ್ಧದ ಕ್ರೌರ್ಯಕ್ಕೆ ಸಂಬಂಧಪಟ್ಟದ್ದೇ ವಿನಃ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುವುದಕ್ಕೆ ಸಂಬಂಧಿಸಿದ್ದಲ್ಲ ಎಂದು ಎರಡೂ ಠಾಣೆಗಳ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರೋಹ್ಟಕ್ ಪ್ರಕರಣದಲ್ಲಿ, ಅಕ್ರಮ ಗೋಸಾಗಾಣಿಕೆಗಾಗಿ ಹೆಚ್ಚುವರಿ ಸೆಕ್ಷನ್ ಸೇರಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಎರಡೂ ಪ್ರಕರಣಗಳಲ್ಲಿ ಕೂಡಾ ಇರ್ಷಾದ್ ಆರೋಪಮುಕ್ತರಾಗಿದ್ದರು.

ಗೋರಕ್ಷಕರಿಂದ ಹತ್ಯೆಗೀಡಾದ ಪೆಹ್ಲೂಖಾನ್ (55) ವಿರುದ್ಧ ಯಾವ ಪ್ರಕರಣವೂ ಇರಲಿಲ್ಲ. ಅಲ್ವಾರ್‌ನಲ್ಲಿ ಎ.1ರಂದು ಹಸುವನ್ನು ಸಾಗಿಸುತ್ತಿದ್ದಾಗ ಗೋರಕ್ಷಕರ ತಂಡ ಇವರ ಮೇಲೆ ಹಲ್ಲೆ ಮಾಡಿತ್ತು. ತೀವ್ರ ಗಾಯಗೊಂಡ ಪೆಹ್ಲೂಖಾನ್ ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಘಟನೆ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News