×
Ad

ಇದೊಂದು ವಿಶೇಷ ವಿವಾಹ!: ಕುತೂಹಲ ತಣಿಯಲು ಕ್ಲಿಕ್ ಮಾಡಿ

Update: 2017-04-27 09:27 IST

ಜಲಂಧರ್, ಎ.27: ಇದೊಂದು ಅಪರೂಪದ ವಿವಾಹ. ವಿವಾಹಕ್ಕೆ ಮುನ್ನವೇ ಈ ಜೋಡಿಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಏನೇನೋ ಕಮೆಂಟ್ ಬಂದವು. ಇದರಿಂದಾಗಿ ರಹಸ್ಯ ವಿವಾಹ ಬಂಧನಕ್ಕೆ ಒಳಗಾಗಲು ನಿರ್ಧರಿಸಿದ್ದ ಜೋಡಿ ಕೊನೆಗೆ ಮುಕ್ತವಾಗಿ ನೂರಾರು ಮಂದಿಯ ಸಮ್ಮುಖದಲ್ಲೇ ವಿವಾಹವಾದರು. ಇದರಲ್ಲೇನು ವಿಶೇಷ ಎಂದು ಹುಬ್ಬೇರಿಸಬೇಡಿ!

ಇದು ದೇಶದಲ್ಲಿ ಶಾಸ್ತ್ರೋಕ್ತವಾಗಿ ನಡೆದ ಮೊಟ್ಟಮೊದಲ ಸಲಿಂಗಿ ವಿವಾಹ. ಕಪುರ್ತಲದಲ್ಲಿ ಕರ್ತವ್ಯದಲ್ಲಿರುವ ಮಂಜೀತ್ ಸಂಧು (43) ಎಂಬ ಮಹಿಳಾ ಪೊಲೀಸ್, ಬಟಿಂಡಾ ಪ್ರದೇಶದ ಕ್ರಿಶ್ಚಿಯನ್ ಮಹಿಳೆಯೊಬ್ಬರನ್ನು ಹಿಂದೂ ಶಾಸ್ತ್ರದ ಪ್ರಕಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಇತ್ತೀಚೆಗೆ ಇಲ್ಲಿನ ಜನತಾ ಮಂದಿರದಲ್ಲಿ ವಿವಾಹವಾದರು.

ಇಬ್ಬರಿಗೂ ಈ ಮೊದಲು ವಿವಾಹವಾಗಿದ್ದು, ಇಬ್ಬರ ಗಂಡಂದಿರೂ ಮೃತಪಟ್ಟಿದ್ದರು. ಹೊಸ ಸಂಗಾತಿಯ ಮೂರು ವರ್ಷದ ಮಗಳನ್ನು ವಿಧ್ಯುಕ್ತವಾಗಿ ದತ್ತುಪಡೆಯಲು ಕೂಡಾ ಸಂಧು ನಿರ್ಧರಿಸಿದ್ದಾರೆ. ಉಭಯ ಕುಟುಂಬಗಳ ಸದಸ್ಯರು, ಸ್ನೇಹಿತರು ಹಾಗೂ ಪೊಲೀಸ್ ಸಹೋದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. "ಜನ ಹಿಂದಿನಿಂದ ಏನು ಹೇಳಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ ಸಹೋದ್ಯೋಗಿಗಳು, ನೆರೆಹೊರೆಯವರು ಮತ್ತು ಸ್ನೇಹಿತರ ಬೆಂಬಲ ನಮಗಿದೆ" ಎಂದು ಹೊಸ ಜೋಡಿ ಹೇಳಿಕೊಂಡಿದೆ.

ಅಲಂಕೃತ ಕುದುರೆಗಾಡಿಯಲ್ಲಿ ವಿವಾಹ ಸ್ಥಳಕ್ಕೆ ಆಗಮಿಸಿದ ಸಂಧು, ಕೆಂಪು ರುಮಾಲನ್ನು ತಲೆಗೆ ಸುತ್ತಿಕೊಂಡು ವರನ ಅಲಂಕಾರ ಮಾಡಿಕೊಂಡಿದ್ದರು. ನೋಟಿನ ಮಾಲೆ ಧರಿಸಿದ್ದರು. ವಧುವಿನ ಹಣೆಗೆ ತಿಲಕವಿಟ್ಟು, ಅದೇ ಅಲಂಕೃತ ರಥದಲ್ಲಿ ಸಂಗಾತಿಯನ್ನು ಮನೆಗೆ ಕರೆದೊಯ್ದರು. ವಧು ಕೆಂಪು ಲೆಹಂಗಾ ಮತ್ತು ಬಳೆಗಳಿಂದ ಶೋಭಿಸುತ್ತಿದ್ದಳು. ಇಬ್ಬರ ಕೈಯಲ್ಲೂ ಮೆಹಂದಿ ರಾರಾಜಿಸುತ್ತಿತ್ತು.

ಕೂದಲು ಕತ್ತರಿಸಿ, ಪ್ಯಾಂಟ್, ಷರ್ಟ್ ಇಷ್ಟಪಡುವ ಸಂಧು ಪ್ರತಿ ದಿನ ಜಿಮ್‌ಗೆ ತೆರಳುತ್ತಾರೆ ಹಾಗೂ ಬೈಕ್ ಸವಾರಿ ಮಾಡುತ್ತಾರೆ. ನಾನು ಸದಾ ಪುರುಷರಂತೇ ಇರುತ್ತಿದ್ದೆ. ಆದರೆ ಎಂದೂ ಲಿಂಗ ಬದಲಾವಣೆ ಯೋಚನೆ ಮಾಡಲಿಲ್ಲ ಎಂದು ಸಂಧು ವಿವರಿಸಿದರು. ಸಂಧು ಅವರ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ಬಟಿಂಡಾದಲ್ಲಿ ಕರ್ತವ್ಯದಲ್ಲಿದ್ದಾಗ ಈಕೆಯ ಪರಿಚಯವಾಯಿತು. ನಿಯತವಾಗಿ ನಾವಿಬ್ಬರೂ ಸಂಧಿಸುತ್ತಿದ್ದೆವು ಎಂದು ಹೇಳಿದ್ದಾರೆ. "ನಾನು ಮತ್ತೊಬ್ಬ ಪುರುಷನನ್ನು ವಿವಾಹವಾಗಲು ಇಷ್ಟವಿರಲಿಲ್ಲ. ನನ್ನ ಆದ್ಯತೆ ಮಹಿಳೆಯಾಗಿದ್ದರು" ಎಂದು ಸಂಧು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News