ಪ್ರಚಾರ ಪಡೆದ ನಂತರ ನನ್ನ ಮಗಳನ್ನು ವೈದ್ಯರು ಕೈಬಿಟ್ಟಿದ್ದಾರೆ
ಮುಂಬೈ, ಎ. 27: ಪ್ರಚಾರ ಪಡೆದು, ಮುಂಬೈ ಸೈಫಿ ಆಸ್ಪತ್ರೆ ಅಧಿಕಾರಿಗಳು ಮತ್ತು ಬಾರಿಯಾಟ್ರಿಕ್ ಸರ್ಜನ್ ಡಾ. ಮುಫಝಲ್ ಲಕಡ್‌ವಾಲ ತನ್ನ ಮಗಳನ್ನು ಬಲಿಪಶು ಮಾಡಿದ್ದಾರೆ ಎಂದು ಇಮಾನ್‌ರ ತಾಯಿ ತನಾ ಅಹ್ಮದ್ ಆರೋಪಿಸಿದ್ದಾರೆ.
ಜಗತ್ತಿನ ಅತ್ಯಂತ ಭಾರದ ಮಹಿಳೆ ಈಜಿಪ್ಟ್‌ನ ಇಮಾನ್ ಅಹ್ಮದ್‌ರ ದೇಹದ ಭಾರ ಗಣನೀಯವಾಗಿ ಕಡಿಮೆಯಾಗಿಲ್ಲ ಎಂದು ಇಮಾನ್‌ರ ಸಹೋದರಿ ಶೈಮಾ ಫೇಸ್‌ಬುಕ್ ವೀಡಿಯೊ ಮೂಲಕ ಆರೋಪಿಸಿದ ಬೆನ್ನಿಗೆ ಇಮಾನ್‌ರ ತಾಯಿ ತನಾ ಕೂಡಾ ಮುಂಬೈಯ ಸೈಫಿ ಆಸ್ಪತ್ರೆ ಮತ್ತುವೈದ್ಯರ ವಿರುದ್ಧ ರಂಗಪ್ರವೇಶಿಸಿದ್ದಾರೆ.
ಇಮಾನ್ ನಡೆದಾಡಲುಸಾಧ್ಯವಾಗುವವರೆಗೆ ಆಸ್ಪತ್ರೆಯಲ್ಲಿ ಉಳಿಸಿಕೊಂಡು ಚಿಕಿತ್ಸೆ ನೀಡುತ್ತೇವೆ ಎಂದು ಮೂರು ತಿಂಗಳ ಹಿಂದೆ ಮನೆಗೆ ಬಂದು ಡಾ. ಮುಫಝಲ್ ಲಕಡ್‌ವಾಲ ಭರವಸೆ ಕೊಟ್ಟಿದ್ದರು. ಆದರೆ ತನ್ನ ಪುತ್ರಿಯ ಚಿಕಿತ್ಸೆ ನೀಡುವ ನೆಪದಲ್ಲಿ ಭಾರೀ ಪ್ರಚಾರ ಮತ್ತು ಪ್ರಶಸ್ತಿ ಎರಡನ್ನೂ ಅವರು ಗಳಿಸಿದ್ದಾಯಿತು. ಈಗ ಇಮಾನ್‌ಳನ್ನು ಆಸ್ಪತ್ರೆಯಿಂದ ಹೇಗಾದರೂ ಮಾಡಿ ಹೊರಗೆ ಕಳುಹಿಸಬೇಕಾಗಿದೆ. ಲಕಡ್‌ವಾಲಾ ಇಮಾನ್‌ಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ಗೆ ಹವಣಿಕೆ ನಡೆಸುತ್ತಿದ್ದಾರೆ ಎಂದು ತನಾ ಆರೋಪಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಮಾನ್ ಅಂದಾಡುತ್ತಿರಲಿಲ್ಲ. ಆದರೆ ವೈದ್ಯರು ನಗುನಗುತ್ತಾ ಪ್ರಶಸ್ತಿ ಪಡೆದರು ಎಂದು 54ವರ್ಷದ ತನಾ ಅಹ್ಮದ್ ಗಂಭೀರ ಆರೋಪಿಸಿದ್ದಾರೆ.
ಜೊತೆಗೆ ತನಾ ಅಹ್ಮದ್, ಈಗ ತನ್ನಪುತ್ರಿಯ ಜೀವ ಅಪಾಯದಲ್ಲಿದೆ. ಬೇರೆಲ್ಲಿಗಾದರೂ ಕರೆದು ಕೊಂಡು ಹೋಗಿ ಚಿಕಿತ್ಸೆ ಮುಂದುವರಿಸಬೇಕಾಗಿದೆ. ಇದಕ್ಕಾಗಿ ನೆರವಾಗಬೇಕೆಂದು ತನಾ ವಿನಂತಿಸುತ್ತಿದ್ದಾರೆ. ಇದೇ ವೇಳೆ ಇಮಾನ್‌ರ ಬಂಧುಗಳು ಕೂಡಾ ಸೈಫಿ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಆರೋಪ ಹೊರಿಸಿದ್ದು, ಇಮಾನ್‌ಳ ಚಿಕಿತ್ಸೆಗೆ ಈಜಿಪ್ಟ್ ಸೇನೆ, ಈಜಿಪ್ಟ್ ಮತ್ತು ದುಬೈಯ ವಿವಿಧ ಆಸ್ಪತ್ರೆಗಳು ಸಹಾಯಹಸ್ತ ಚಾಚಿದ್ದವುಅವೆಲ್ಲವನ್ನೂ ನಯವಾಗಿ ನಿರಾಕರಿಸಿ ಇಮಾನ್‌ಳನ್ನು ನಾವು ಮುಂಬೈ ಆಸ್ಪತ್ರೆಗೆ ಕರೆತಂದೆವು. ಇದಕ್ಕೆ ವೈದ್ಯರಲ್ಲಿದ್ದ ನಂಬಿಕೆ ಕಾರಣವಾಗಿತ್ತು ಎಂದು ಹೇಳುತ್ತಿದ್ದಾರೆ.