ಪಕ್ಷ ತ್ಯಜಿಸುವುದಿಲ್ಲ , ಆಂದೋಲನಕ್ಕೆ ದ್ರೋಹ ಎಸಗುವುದಿಲ್ಲ...: ಕೇಜ್ರೀವಾಲ್

Update: 2017-04-27 13:38 GMT

 ಹೊಸದಿಲ್ಲಿ, ಎ.27: ಈ ಪರಿಶುದ್ಧ ಪಕ್ಷವನ್ನು ಎಂದಿಗೂ ತ್ಯಜಿಸುವುದಿಲ್ಲ ಮತ್ತು ಆಂದೋಲನಕ್ಕೆ ದ್ರೋಹ ಎಸಗುವುದಿಲ್ಲ ಎಂದು ದೇವರನ್ನು ಸಾಕ್ಷಿ ಎಂದು ಪರಿಗಣಿಸಿ ನಾನು ಪ್ರತಿಜ್ಞೆ ಮಾಡುತ್ತಿದ್ದೇನೆ.... ಹೀಗೆಂದು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರೀವಾಲ್ ಪಕ್ಷದ ಕಾರ್ಪೊರೇಟರ್‌ಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

  ದಿಲ್ಲಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಆಪ್ ಪಕ್ಷಕ್ಕೆ ಮುಖಭಂಗವಾದ ಬಳಿಕ , ಪಾಲಿಕೆಗೆ ಆಯ್ಕೆಗೊಂಡ 48 ಕಾರ್ಪೊರೇಟರ್‌ಗಳ ಜೊತೆ ಸಭೆ ನಡೆಸಿದ ಕೇಜ್ರೀವಾಲ್ ಈ ರೀತಿ ಪ್ರತಿಜ್ಞಾವಿಧಿ ಬೋಧಿಸುತ್ತಿರುವ ವಿಡಿಯೊ ದೃಶ್ಯವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

 ವಿಡಿಯೋ ದೃಶ್ಯದಲ್ಲಿ ಕೇಜ್ರೀವಾಲ್ ಹೀಗೆ ಹೇಳುತ್ತಾರೆ- ಇತರ ಪಕ್ಷದವರಂತೆ ಆಪ್ ಪಕ್ಷ ಟಿಕೆಟ್‌ಗಳನ್ನು ಮಾರುವುದಿಲ್ಲ. ಪ್ರಾಮಾಣಿಕರಾಗಿ ಇರಬೇಕೆಂದು ನೀವು ಬಯಸಿದ್ದರೆ ಹಾಗೆ ಇರಲು ಸಾಧ್ಯವಿದೆ. ದಿಲ್ಲಿ ಮಹಾನಗರಪಾಲಿಕೆ ಭ್ರಷ್ಟಾಚಾರಿಗಳ ಗುಹೆಯಾಗಿದೆ. ಅಲ್ಲಿ ಪ್ರಾಮಾಣಿಕರಾಗಿಯೇ ಇರಬೇಕು ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಬೇಕು.

ನಗರಪಾಲಿಕೆ ಹಂತದಲ್ಲಿ ಪಕ್ಷಾಂತರ ವಿರೋಧಿ ಕಾನೂನು ಇಲ್ಲದಿರುವ ಕಾರಣ ಬಿಜೆಪಿಯು ಪಕ್ಷಾಂತರ ಮಾಡುವಂತೆ ನಿಮಗೆ ಆಮಿಷ ಒಡ್ಡುವ ಸಾಧ್ಯತೆಯಿದೆ. ನಿಮಗೆ ಬರುವ ಫೋನ್ ಕರೆಗಳನ್ನು ರೆಕಾರ್ಡ್ ಮಾಡಿಟ್ಟುಕೊಳ್ಳಿ. ನಿಮ್ಮಲ್ಲಿ ಯಾರಾದರೊಬ್ಬರು ನಮ್ಮ ಆಂದೋಲನಕ್ಕೆ ದ್ರೋಹ ಬಗೆದರೆ, ಅವರು ದೇವರಿಗೇ ದ್ರೋಹ ಬಗೆದಂತಾಗುತ್ತದೆ . ಈ ಆಂದೋಲನ ಮತ್ತು ಇದರಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಪರಿಶುದ್ಧರಾಗಿದ್ದಾರೆ ಎಂದು ಕೇಜ್ರೀವಾಲ್ ಹೇಳಿದ್ದಾರೆ.

ಅಲ್ಲದೆ ಕಾರ್ಪೊರೇಟರ್‌ಗಳು ಏನನ್ನು ಮಾಡಬೇಕು, ಏನು ಮಾಡಬಾರದು ಎಂಬ ಪಟ್ಟಿಯನ್ನೂ ಅವರಿಗೆ ವಿವರಿಸಿ ಹೇಳಿರುವ ಕೇಜ್ರೀವಾಲ್, ಸದಾ ಎಚ್ಚರಿಕೆಯ ಸ್ಥಿತಿಯಲ್ಲಿ ಇರುವಂತೆ ಅವರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News