ಮಾಂಸದ ಕೊರತೆಯಿಂದ ಮದುವೆಯೇ ರದ್ದು, ಇನ್ನೋರ್ವ ಯುವಕನ ಕೈಹಿಡಿದ ವಧು

Update: 2017-04-27 13:48 GMT

ಮುಝಫರ್‌ನಗರ(ಉ.ಪ್ರ),ಎ.27: ಮದುವೆ ಸಮಾರಂಭದಲ್ಲಿ ಸಸ್ಯಾಹಾರಿ ಭೋಜನವನ್ನು ಏರ್ಪಡಿಸಿದ್ದ ತಪ್ಪಿಗೆ ಮದುವೆಯೇ ರದ್ದುಗೊಂಡ ಘಟನೆ ಮುಝಫರ್‌ನಗರ ಜಿಲ್ಲೆಯ ಕುಲ್ಹೆದಿ ಗ್ರಾಮದಲ್ಲಿ ನಡೆದಿದೆ.ಬುಧವಾರ ಮದುವೆ ಮಂಟಪದಲ್ಲಿ ಬಡಿಸಲಾಗಿದ್ದ ಊಟದಲ್ಲಿ ಮಾಂಸವಿಲ್ಲದ್ದನ್ನು ಕಂಡು ಗಂಡಿನ ಕಡೆಯವರು ಅಸಮಾಧಾನಗೊಂಡಿದ್ದರು. ಮಾರುಕಟ್ಟೆಯಲ್ಲಿ ಮಾಂಸದ ಕೊರತೆಯಿಂದಾಗಿ ಅನಿವಾರ್ಯವಾಗಿ ಸಸ್ಯಾಹಾರಿ ಭೋಜನವನ್ನು ಏರ್ಪಡಿಸಲಾಗಿದೆ ಎಂದು ವಧುವಿನ ಕಡೆಯವರು ಸಮಾಧಾನಗೊಳಿಸಲು ಮುಂದಾಗಿದ್ದರೂ ವರನ ಕಡೆಯವರು ಮಾತ್ರ ಮದುವೆಯನ್ನೇ ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದ್ದರು.

ವಿವಾದವನ್ನು ಬಗೆಹರಿಸಲು ಶೀಘ್ರವೇ ಪಂಚಾಯಿತಿ ಸಭೆಯನ್ನು ಕರೆಯಲಾಗಿತ್ತು. ಆದರೆ ಈಗ ಆ ವರನನ್ನು ಮದುವೆಯಾಗದಿರಲು ವಧು ನಿರ್ಧರಿಸಿದ್ದಳು. ಮದುವೆ ಮಂಟಪದಲ್ಲಿ ಉಪಸ್ಥಿತನಿದ್ದ ಯುವಕನೋರ್ವ ಆಕೆಯನ್ನು ಮದುವೆಯಾಗಲು ಮುಂದೆ ಬಂದಾಗ ಆಕೆ ಒಪ್ಪಿಕೊಳ್ಳುವ ಮೂಲಕ ವಧುವಿನ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ಪಂಚಾಯಿತಿಯೂ ಈ ಮದುವೆಗೆ ತನ್ನ ಒಪ್ಪಿಗೆಯನ್ನು ನೀಡಿದ್ದರಿಂದ ಅದೇ ಸಸ್ಯಾಹಾರದೊಂದಿಗೆ ಮದುವೆ ಸಾಂಗವಾಗಿ ನೆರವೇರಿದರೆ, ಮೊದಲಿನ ವರನ ಕಡೆಯವರು ಊಟವೂ ಇಲ್ಲದೇ,ವಧುವೂ ಇಲ್ಲದೇ ಮರಳಿದರು.

 ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳ ಮೇಲಿನ ನಿಷೇಧದಿಂದಾಗಿ ಮಾರುಕಟ್ಟೆಯಲ್ಲಿ ಕೆಜಿಗೆ 150 ರೂ.ಗೆ ಮಾರಾಟವಾಗುತ್ತಿದ್ದ ಕೋಣದ ಮಾಂಸಕ್ಕೆ ಈಗ 400 ರೂ.ಕಕ್ಕಬೇಕಾಗಿದೆ. ಅದೇ ರೀತಿ ಮಟನ್ ಕೆಜಿಗೆ 350 ರೂ.ಗಳಿಂದ 600 ರೂ.ಗೇರಿದ್ದರೆ, ಕೋಳಿಮಾಂಸದ ಬೆಲೆ ದುಪ್ಪಟ್ಟುಗೊಂಡು ಕೆಜಿಗೆ 260 ರೂ.ಗೆ ಮಾರಾಟವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News