ಪಾಕ್ ಪ್ರಧಾನಿ ನವಾಝ್ ಷರೀಫ್ ಗೆ ಪ್ರಧಾನಿ ಮೋದಿಯ ಸಂದೇಶ ತಲುಪಿಸಿ ಬಂದರೇ ಈ ಭಾರತೀಯ ಉದ್ಯಮಿ ?
ಹೊಸದಿಲ್ಲಿ, ಎ. 27: ಭಾರತದ ಖ್ಯಾತ ಉದ್ಯಮಿ ಸಜ್ಜನ್ ಜಿಂದಾಲ್ ನೇತೃತ್ವದ ಭಾರತೀಯ ನಿಯೋಗವೊಂದು ಗುರುವಾರ ಪ್ರಧಾನಿ ನವಾಝ್ ಷರೀಫ್ ಅವರನ್ನು ಪಾಕಿಸ್ತಾನದಲ್ಲಿ ಗುಪ್ತವಾಗಿ ಭೇಟಿ ಮಾಡಿ ಭಾರತಕ್ಕೆ ವಾಪಸ್ಸಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿ ಜನಸತ್ತಾ ವರದಿ ಮಾಡಿದೆ.
ಆದರೆ ಭಾರತೀಯ ನಿಯೋಗ ಆಗಮಿಸಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಸಜ್ಜನ್ ಜಿಂದಾಲ್ ನೇತೃತ್ವದ ಮೂರು ಮಂದಿಯ ನಿಯೋಗ ಮುರೀ ಎಂಬಲ್ಲಿಗೆ ತೆರಳಿ ಮೂರು ಗಂಟೆಗಳ ಕಾಲ ಷರೀಫ್ ಜತೆ ಮಾತುಕತೆ ನಡೆಸಿದೆ. ಭೋಜನಕೂಟದ ಬಳಿಕ ಭಾರತಕ್ಕೆ ವಾಪಸ್ಸಾಗಿದೆ ಎಂದು ಮೂಲಗಳು ಹೇಳಿವೆ. ಸಜ್ಜನ್ ಹಾಗು ಷರೀಫ್ ಕುಟುಂಬಗಳ ನಡುವೆ ಉದ್ಯಮ ಸಂಬಂಧ ಇದ್ದು ಅತ್ಯಂತ ಆಪ್ತರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ ಈ ಭೇಟಿಯಲ್ಲಿ ಮೋದಿ ಅವರ ಸಂದೇಶವನ್ನು ಷರೀಫ್‌ಗೆ ತಲುಪಿಸುವ ಸಲುವಾಗಿ ಈ ನಿಯೋಗ ಆಗಮಿಸಿತ್ತು ಎನ್ನಲಾಗಿದೆ.
ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯ ವೇಳೆ ಮೋದಿ- ಷರೀಫ್ ನಡುವಿನ ಮಾತುಕತೆಗೆ ವೇದಿಕೆ ಸಜ್ಜು ಮಾಡುವ ಬಗ್ಗೆ ಈ ನಿಯೋಗ ಚರ್ಚಿಸಿತು ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ . ಈ ಮಧ್ಯೆ ತೆಹ್ರಿಕ್-ಇ-ಇನ್ಸಾಫ್ ಪಕ್ಷ , ಭಾರತೀಯ ನಿಯೋಗ ಆಗಮಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ವಿರೋಧ ಪಕ್ಷದ ನಾಯಕ ಮೆಹಮೂದ್ ಉರ್ ರಶೀದ್ ಈ ಸಂಬಂಧ ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದಾರೆ. ಸಂಸತ್ತಿನಲ್ಲೂ ವಿಷಯ ಪ್ರಸ್ತಾಪಿಸಲು ಈ ಸಂಘಟನೆ ನಿರ್ಧರಿಸಿದೆ. ಭಾರತೀಯ ನಿಯೋಗದ ಭೇಟಿಯ ಉದ್ದೇಶದ ಬಗ್ಗೆ ಜನರಿಗೆ ವಿವರಣೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.