ರಾಜ್‌ನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಸಿಆರ್‌ಪಿಎಫ್ ಯೋಧನ ವೀಡಿಯೊ ವೈರಲ್

Update: 2017-04-27 17:30 GMT

 ಹೊಸದಿಲ್ಲಿ,ಎ.27: ಇತ್ತೀಚಿಗೆ ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಕ್ಸಲರು ನಡೆಸಿದ ದಾಳಿಯಲ್ಲಿ ತನ್ನ ಸಂಬಂಧಿಯನ್ನು ಕಳೆದುಕೊಂಡಿ ರುವ ಅದೇ ಪಡೆಯ ಯೋಧ ಪಂಕಜ್ ಮಿಶ್ರಾ ಗೃಹಸಚಿವ ರಾಜ್‌ನಾಥ್ ಸಿಂಗ್ ಅವರನ್ನು ತೀವ್ರ ತರಾಟೆಗೆತ್ತಿಕೊಂಡಿರುವ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಮಿಶ್ರಾ ವೀಡಿಯೊದಲ್ಲಿ ತನ್ನ ಹತಾಶೆಯನ್ನು ತೋಡಿಕೊಂಡಿದ್ದಾರೆ.

ಮಿಶ್ರಾ ಪ.ಬಂಗಾಲದ ದುರ್ಗಾಪುರದಲ್ಲಿ ನಿಯೋಜಿತ ಸಿಆರ್‌ಪಿಎಫ್‌ನ 221 ಬಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಸಿಆರ್‌ಪಿಎಫ್ ಯೋಧರ ಹತಾಶೆಯ ಬಗ್ಗೆ ನಿಯಮಿತ ಪೋಸ್ಟ್‌ಗಳನ್ನು ಕಾಣಬಹುದಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಸಿಆರ್‌ಪಿಎಫ್ ಯೋಧರ ಗ್ರಾಫಿಕ್ ಚಿತ್ರಗಳೂ ಈ ಪೋಸ್ಟ್‌ಗಳಲ್ಲಿವೆ.

  ‘‘ಈ ಸಿಆರ್‌ಪಿಎಫ್ ಯೋಧರು ಅಮಿತ್ ಶಾರಂತಹ ನಾಯಕರಿಗೆ ಭದ್ರತೆಯನ್ನು ಒದಗಿಸುತ್ತಾರೆ ಎನ್ನುವುದನ್ನು ಅವರು ಮರೆಯಬಾರದು. ನಾವು ಮೋದಿಜಿಯವರಿಗೆ ಮತ ನೀಡಿದ್ದೆವೆಯೇ ಹೊರತು ಬಿಜೆಪಿಗಲ್ಲ. ರಾಜನಾಥ್ ಸಿಂಗ್ ಅವರಂತಹ ನಾಯಕರು ಪ್ರಧಾನಿಯವರ ದಾರಿಯನ್ನು ತಪ್ಪಿಸುತ್ತಿದ್ದಾರೆ ’’ ಎಂದು ಹೇಳಿರುವ ಮಿಶ್ರಾ, ಹತ ಯೋಧರ ಕುಟುಂಬಗಳನ್ನು ಭೇಟಿಯಾಗುವಂತೆ ಗೃಹಸಚಿವರನ್ನು ಕೋರಿಕೊಂಡಿ ದ್ದಾರೆ.

ಸಿಆರ್‌ಪಿಎಫ್ ಯೋಧರ ನೋವನ್ನು ಅರ್ಥ ಮಾಡಿಕೊಳ್ಳುವಂತೆ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿರುವ ಮಿಶ್ರಾ, ಯೋಧರ ಸಮಸ್ಯೆಗಳೇನು ಎಂದು ಅವರನ್ನೇ ಕೇಳಿ ಹೊರತು ಅರೆ ಮಿಲಿಟರಿ ಪಡೆಗಳ ತರಬೇತಿ ಕಾರ್ಯಕ್ರಮಗಳನ್ನು ಪ್ರಶ್ನಿಸುವ ‘ರಕ್ಷಣಾ ತಜ್ಞರನ್ನು ’ಅಲ್ಲ ಎಂದು ಹೇಳಿದ್ದಾರೆ.

ಆರಾದ ವೀರ ಕುಂವರ್ ಸಿಂಗ್ ವಿವಿಯ ಪದವೀಧರನಾಗಿರುವ ಮಿಶ್ರಾ 2013, ಜನವರಿಯಲ್ಲಿ ಸೇವೆಗೆ ಸೇರಿದ್ದರು. ವೀಡಿಯೊ ಪೋಸ್ಟ್ ಮಾಡಿರುವುದಕ್ಕಾಗಿ ಸಿಆರ್‌ಪಿಎಫ್ ತನ್ನ ವಿರುದ್ಧ ಕ್ರಮಕ್ಕೆ ಮುಂದಾದರೆ ಅದನ್ನು ಎದುರಿಸಲು ಸಿದ್ಧ ಎಂದು ತನ್ನನ್ನು ಸಂಪರ್ಕಿಸಿದ ಸುದ್ದಿ ಜಾಲತಾಣಕ್ಕೆ ತಿಳಿಸಿದ್ದಾರೆ.

ಇದು ಸಶಸ್ತ್ರ ಪಡೆಗಳ ಯೋಧರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಸರಣಿ ವೀಡಿಯೋಗಳಲ್ಲಿ ಇತ್ತೀಚಿನದಾಗಿದೆ. ಯೋಧರಿಗೆ ಕಳಪೆ ಆಹಾರವನ್ನು ನೀಡಲಾಗುತ್ತಿದೆ ಎಂದು ದೂರಿ ಕಳೆದ ಜನವರಿಯಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದ ಬಿಎಸ್‌ಎಫ್ ಯೋಧ ತೇಜ್ ಬಹದೂರ್ ಯಾದವ್ ಅವರನ್ನು ವಿಚಾರಣೆಯ ಬಳಿಕ ಕಳೆದ ವಾರ ಸೇವೆಯಿಂದ ವಜಾ ಮಾಡಲಾಗಿದೆ.

ಯೋಧರು ಎದುರಿಸುತ್ತಿರುವ ಸಮಸ್ಯೆಗಳ ಬಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಕ್ಕಾಗಿ ಹಿರಿಯ ಅಧಿಕಾರಿಗಳಿಂದ ಕಿರುಕುಳವನ್ನು ಆರೋಪಿಸಿ ಸೇನೆಯ ಲಾನ್ಸ್ ನಾಯ್ಕ್ ಯಜ್ಞಪ್ರತಾಪ್ ಸಿಂಗ್ ಅವರು ಈ ವರ್ಷದ ಆರಂಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದರು.

ವಾಸ್ತವದಲ್ಲಿ ಮಿಶ್ರಾ ಕಳಪೆ ಆಹಾರ ಕುರಿತು ಯಾದವ್ ದೂರನ್ನು ಬೆಂಬಲಿಸಿದ್ದರು. ಸಿಆರ್‌ಪಿಎಫ್ ಯೋಧರು ಮೇಲಧಿಕಾರಿಗಳಿಂದ ಇಂತಹುದೇ ಶೋಷಣೆಯನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News