ಜೊತೆಗೆ ಇರಲಿಕ್ಕಾಗಿ ಮಕ್ಕಳಿಂದ ತಪ್ಪಿಸಿಕೊಂಡು ಓಡಿ ಬಂದೆವು : ಸಂಶುದ್ದೀನ್ ಮಿಯಾ, ಬೇಗಂ

Update: 2017-04-28 09:02 GMT

ಕಳೆದ ವರ್ಷ ನಾವಿಬ್ಬರೂ ಜತೆಯಾಗಿಯೇ ಓಡಿ ಬಂದಿದ್ದೆವು. ಹಾಗೆ ಮಾಡಲು ಸಾಧ್ಯವಾಗಬಹುದೆಂದು ನಾವೆಣಿಸಿರಲೇ ಇಲ್ಲ. ನಮ್ಮ ಮಕ್ಕಳು ನಮ್ಮೊಂದಿಗೆ ಮಾತು ನಿಲ್ಲಿಸಬಹುದೆಂದು ನನಗೆ ಗೊತ್ತಿತ್ತು. ನಾನು ಮತ್ತು ನನ್ನ ಪತ್ನಿ ಜತೆಯಾಗಿ ನಲ್ವತ್ತೇಳು ವರ್ಷಗಳಿಂದ ಬಾಳುತ್ತಿದ್ದೇವೆ. ಪ್ರತಿ ದಿನ ಆಕೆ ನನ್ನನ್ನು ಎಬ್ಬಿಸುತ್ತಿದ್ದಳು ಹಾಗೂ ನಾವಿಬ್ಬರೂ ಜತೆಯಾಗಿಯೇ ಪ್ರಾರ್ಥನೆ ಸಲ್ಲಿಸುತ್ತಿದ್ದೆವು.

ನಲ್ವತ್ತೇಳು ವರ್ಷಗಳಲ್ಲಿ ಒಂದು ದಿನವೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಿಲ್ಲ. ಪ್ರತಿ ದಿನ ಬೆಳಗೆದ್ದು ನಾನು ನನ್ನ ಪತ್ನಿಯ ಮುಖವನ್ನೇ ನೋಡುತ್ತಿದ್ದೆ. ನಮ್ಮ ಆರು ಜನ ಮಕ್ಕಳೊಂದಿಗೆ ನಾವು ಬಹಳಷ್ಟು ಕಷ್ಟ ಪಟ್ಟಿದ್ದೆವು. ಹಿಂದೆ ಹಲವಾರು ಬಾರಿ ನಾನು ನನ್ನ ಕುಟುಂಬಕ್ಕೆ ದಿನಕ್ಕೆ ಒಂದು ಬಾರಿ ಆಹಾರ ನೀಡಲು ಮಾತ್ರ ಶಕ್ತನಾಗಿದ್ದೆ. ಮಕ್ಕಳಿಗೆ ಉಣಬಡಿಸಿ ನನ್ನ ಪತ್ನಿ ಇಡೀ ದಿನ ಉಪವಾಸವಿರುತ್ತಿದ್ದಳು.

ಆದರೆ ಆಕೆ ಯಾವತ್ತೂ ದೂರಿರಲಿಲ್ಲ ಹಾಗೂ ಒಬ್ಬ ಗಂಡನಾಗಿ ನಾನು ವಿಫಲನಾಗಿದ್ದೇನೆ ಎಂದು ಹೇಳಿರಲೇ ಇಲ್ಲ. ಇಷ್ಟೆಲ್ಲಾ ಕಷ್ಟ ಬಂದರೂ ನಾವು ಒಟ್ಟಿಗೆ ಇದ್ದೆವು ಒಂದೇ ಒಂದು ದಿನ ಜಗಳವಾಡಲಿಲ್ಲ ಹಾಗೂ ನಮ್ಮ ನಡುವಿನ ವಿಶ್ವಾಸ ಕಳೆದುಕೊಳ್ಳಲಿಲ್ಲ. ನಮ್ಮ ಹಿರಿಯ ಪುತ್ರ ನನ್ನನ್ನು ಹಾಗೂ ನಮ್ಮ ಕಿರಿಯ ಪುತ್ರಿ ಆಕೆಯ ತಾಯಿಯನ್ನು ಕರೆದುಕೊಂಡು ಹೋದಾಗ ಅವರು ನಮ್ಮನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗಲು ನಿರ್ಧರಿಸಿದ್ದರೆಂದು ನಮಗೆ ತಿಳಿದಿರಲಿಲ್ಲ.

ನಮ್ಮ ಮಕ್ಕಳ ದುಡಿಮೆ ಅಲ್ಪವಾಗಿತ್ತು ಹಾಗೂ ಅವರಿಗೆ ಅವರದೇ ಆದ ಖರ್ಚುಗಳಿದ್ದವು. ಅವರ ಮಕ್ಕಳ ಖರ್ಚನ್ನು ನಿಭಾಯಿಸಿದ ನಂತರ ನಮ್ಮ ಖರ್ಚು ಅವರಿಗೊಂದು ಹೊರೆಯಾಗಿತ್ತು. ನಾವಿಬ್ಬರು ಇನ್ನು ಮುಂದೆ ಜತೆಯಾಗಿರಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ನಮಗೆ ಅಸಾಧ್ಯವಾಗಿತ್ತು ಎಂದು ನಮಗೆ ಗೊತ್ತಿತ್ತು. ನಾನು ನಾಚಿಕೆ ಬಿಟ್ಟು ನನ್ನ ಹಿರಿಯ ಪುತ್ರನಲ್ಲಿ ಕೇಳಿದಾಗ ಆತನಿಗೆ ಬಹಳ ಆಶ್ಚರ್ಯವಾಯಿತು. ಅವರಲ್ಲಿ ಯಾರಿಗೂ ಕೂಡ ನಮ್ಮಿಬ್ಬರನ್ನು ಜತೆಯಾಗಿ ನೋಡಿಕೊಳ್ಳುವ ಸಾಮರ್ಥ್ಯವಿಲ್ಲ ಎಂದು ಆತ ನನಗೆ ತಿಳಿಸಿದ.

ನಾನು ಹೊಂದಿಕೊಳ್ಳಲು ಯತ್ನಿಸಿದೆ. ಆದರೆ ಪ್ರತಿ ದಿನ ಬೆಳಗೆದ್ದಾಗ ನನಗೆ ಆಕೆಯ ನಗು ನೋಡಬೇಕಿತ್ತು. ನನ್ನ ಮಗನಲ್ಲಿರುವ ಮೊಬೈಲ್ ಫೋನಿನಿಂದ ಆಕೆಯ ಜತೆಗೆ ಮಾತನಾಡಬೇಕೆಂದು ಇಡೀ ದಿನ ನನ್ನ ಮಗನ ಬರುವಿಕೆಗೆ ಕಾದಿದ್ದೆ. ಆದರೆ ಆತ ತಡ ರಾತ್ರಿ ಬಂದಿದ್ದ ಆ ಸಮಯದಲ್ಲಿ ನನ್ನ ಪುತ್ರಿ ಸಾಮಾನ್ಯವಾಗಿ ನಿದ್ದೆಯಲ್ಲಿರುತ್ತಿದ್ದಳು.

ನನ್ನ ಪತ್ನಿಯ ಧ್ವನಿ ನನಗೆ ಕೇಳಿದ ದಿನ ನಮ್ಮಿಬ್ಬರಿಗೂ ಯಾವುದೇ ಮಾತು ಹೊರಳಲಿಲ್ಲ. ಆಕೆ ತನ್ನ ಗದ್ಗದ ದನಿಯನ್ನು ಆದಷ್ಟು ತಡೆ ಹಿಡಿಯಲೆತ್ನಿಸುತ್ತಿರುವುದು ನನಗೆ ತಿಳಿದು ಬಂತು ಹಾಗೂ ನಾನು ಮನಸ್ಸಿಗೆ ತೋಚಿದ್ದನ್ನು ಹೇಳಿ ಬಿಟ್ಟೆ. ನಾವಿಬ್ಬರು ಜತೆಗಿರದೇ ಇದ್ದರೆ ಬದುಕು ಇಷ್ಟೊಂದು ಅರ್ಥಹೀನವಾಗಬಹುದೆಂದು ನಾನಂದುಕೊಂಡಿರಲೇ ಇಲ್ಲ.

ಪ್ರತಿ ದಿನ ನನ್ನ ಮನೆಗಿಂತ ಬಹಳ ದೂರದಲ್ಲಿರುವ ಪುತ್ರಿಯ ಮನೆಗೆ ಓಡಿ ಹೋಗಬೇಕೆಂದು ಅನಿಸುತ್ತಿತ್ತು. ಒಂದು ದಿನ ಸ್ವಲ್ಪ ಧೈರ್ಯ ತಂದುಕೊಂಡು ನಾವಿಬ್ಬರೂ ಜತೆಯಾಗಿ ಓಡಿ ಹೋಗಬೇಕೆಂದು ನನ್ನ ಇಚ್ಛೆ ಎಂದು ಹೇಳಿ ಬಿಟ್ಟೆ. ನನಗೆ ಆಶ್ಚರ್ಯ ಹುಟ್ಟಿಸುವ ರೀತಿಯಲ್ಲಿ ಆಕೆ ನನಗೆ ಆಗಲೇ ಹೊರಡಲು ತಿಳಿಸಿದಳು. ನಾನು ನನ್ನ ವಾಕಿಂಗ್ ಸ್ಟಿಕ್ ತೆಗೆದುಕೊಂಡೆ ಹಾಗೂ ಹಿಂದಿರುಗಿ ನೋಡಲೇ ಇಲ್ಲ. ನಾವಿಬ್ಬರೂ ಜತೆಯಾಗಿ ಬರಿಗೈಯ್ಯಲ್ಲಿ ಓಡಿ ಹೋದೆವು.

ಈಗ ನಾನು ಮಕ್ಕಳ ಆಟಿಕೆಗಳನ್ನು ಮಾರುತ್ತೇನೆ. ಪ್ರತಿ ದಿನ ನಾನು ಕಷ್ಟ ಪಟ್ಟು 100 ಟಕ ಸಂಪಾದಿಸುತ್ತೇನೆ ಹಾಗೂ ಮನೆಗೆ ಹಿಂದಿರುಗಿದಾಗ ನಮ್ಮ ಹಾಸಿಗೆಯಲ್ಲಿ ಆಹಾರವಿರುತ್ತದೆ. ನಮ್ಮ ಮಕ್ಕಳು ನಮ್ಮನ್ನು ನೋಡಲೆಂದು ಕಳೆದ ವರ್ಷ ಒಂದು ದಿನ ಬಂದಿದ್ದರು ನಾವು ಅವರಿಗೆ ಹೇಗೆ ನಿರಾಸೆ ಉಂಟು ಮಾಡಿದೆವು ಹಾಗೂ ನಮ್ಮ ವರ್ತನೆಯಿಂದ ಅವರಿಗೆಷ್ಟು ಅವಮಾನವಾಯಿತೆಂದು ಅವರು ಹೇಳಿದರು.

ನಾವು ಏನೂ ಹೇಳಲಿಲ್ಲ. ಅವರಿಗೆ ನೋವುಂಟು ಮಾಡುವುದು ನಮಗೆ ಬೇಕಿರಲಿಲ್ಲ. ಅವರು ಮತ್ತೆ ನಮ್ಮನ್ನು ನೋಡಲು ಬರದೇ ಇರಲು ನಿರ್ಧರಿಸಿದರು. ಕೆಲವೊಮ್ಮ ನಮ್ಮ ಮಕ್ಕಳ ಬಗ್ಗೆ ಯೋಚಿಸಿದಾಗ ದುಃಖವುಂಟಾಗುತ್ತದೆ. ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ನಮಗೆ ಹೆಚ್ಚು ಸಮಯ ಉಳಿದಿಲ್ಲವೆಂದು ನಮಗೆ ಗೊತ್ತು. ನಾನು ನನ್ನ ಪತ್ನಿಗಿಂತ 15 ವರ್ಷ ದೊಡ್ಡವ.

ಮಕ್ಕಳ ಆಟಿಕೆಗಳನ್ನು ಮಾರಾಟ ಮಾಡುವಾಗ ಯಾವುದೇ ದಿನ ನಾನು ರಸ್ತೆಯಲ್ಲಿ ಸಾಯಬಹುದು. ಅದಕ್ಕಾಗಿ ನಾನು ಸ್ವಲ್ಪ ಹಣವನ್ನು ಮಣ್ಣಿನ ಬ್ಯಾಂಕಿನಲ್ಲಿ ಉಳಿತಾಯ ಮಾಡುತ್ತಿದ್ದೇನೆ. ನನ್ನ ಅಂತ್ಯಕ್ರಿಯೆಗಾಗಿ ನನ್ನ ಪತ್ನಿ ಜನರ ಬಳಿ ಭಿಕ್ಷೆ ಬೇಡುವುದು ನನಗಿಷ್ಟವಿಲ್ಲ. ಆದರೆ ಪ್ರತಿ ದಿನ ಪ್ರಾರ್ಥನೆಯ ವೇಳೆ ನನ್ನ ಪತ್ನಿ ಬಹಳಷ್ಟು ದುಃಖಿಸುತ್ತಾಳೆ. ಅಳುತ್ತೀಯೇಕೆ ಎಂದು ಪ್ರತಿ ಬಾರಿ ಪ್ರಶ್ನಿಸಿದಾಗ ಆಕೆ ‘‘ನಾನು ನಿಮ್ಮೊಂದಿಗೆ ಸಾಯಲು ಇಚ್ಛಿಸುತ್ತೇನೆ,’’ ಎನ್ನುತ್ತಾಳೆ.

- ಸಂಶುದ್ದೀನ್ ಮಿಯಾ (77) ಮತ್ತವರ ಪತ್ನಿ ರೇಖಾ ಬೇಗಂ (62)

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News