ಸಿರಿಯ ನಿರಾಶ್ರಿತೆ ವಿಶ್ವಸಂಸ್ಥೆ ರಾಯಭಾರಿ
ಜಿನೇವ, ಎ. 28: ಜರ್ಮನಿಯಲ್ಲಿ ಆಶ್ರಯ ಪಡೆದಿರುವ ಸಿರಿಯ ನಿರಾಶ್ರಿತೆ ಯೂಸ್ರಾ ಮರ್ದಿನಿ ಅವರನ್ನು ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿ ನೇಮಿಸಲಾಗಿದೆ.
ಸಿರಿಯದ ಯುದ್ಧದಿಂದ ತಪ್ಪಿಸಿಕೊಂಡು ಸಣ್ಣ ದೋಣಿಯಲ್ಲಿ ಮೆಡಿಟರೇನಿಯನ್ ಸಮುದ್ರ ದಾಟುತ್ತಿದ್ದಾಗ ಅವರ ದೋಣಿ ಮುಳುಗಿತ್ತು. ಆಗ ಅವರು ಮತ್ತು ತಂಗಿ ಗಂಟೆಗಳ ಕಾಲ ಈಜಿ ಗ್ರೀಸ್‌ನ ಲೆಸ್ಬೋಸ್ ತಲುಪಿದ್ದರು. ಇತರ 20 ಮಂದಿಯನ್ನೂ ಅವರು ರಕ್ಷಿಸಿದ್ದರು.
ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಅವರು ನಿರಾಶ್ರಿತ ಒಲಿಂಪಿಕ್ಸ್ ತಂಡದ ಸದಸ್ಯೆಯಾಗಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈಗ ಅವರು ಯುದ್ಧದಿಂದ ನಿರಾಶ್ರಿತರಾದ ಜನರ ಧ್ವನಿಯಾಗಿದ್ದಾರೆ.
‘‘ನನಗೆ ಸಿಕ್ಕಿದ ಅವಕಾಶ ಮತ್ತು ವೇದಿಕೆಗಾಗಿ ನಾನು ಕೃತಜ್ಞಳಾಗಿದ್ದೇನೆ. ಈ ಎಳೆಯ ಪ್ರಾಯದಲ್ಲೇ ನಾವು ಅನುಭವಿಸಿದ ಭಯಾನಕ ಅನುಭವಗಳು, ನಾವು ಪ್ರೀತಿಸಿದ ಮತ್ತು ಕಳೆದುಕೊಂಡ ಮನೆಗಳು, ನಾವು ಕಳೆದುಕೊಂಡ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಬಗ್ಗೆ ಜಗತ್ತಿಗೆ ಹೇಳಬಹುದಾಗಿದೆ. ನಾವು 100 ವರ್ಷ ಬದುಕಿದ್ದೇವೇನೋ ಎಂದು ಅನಿಸುತ್ತಿದೆ’’ ಎಂದು 19 ವರ್ಷದ ಮರ್ದಿನಿ ಹೇಳುತ್ತಾರೆ. ಅವರು ಬರ್ಲಿನ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಹಾಗೂ ಈಜು ತರಬೇತಿಯನ್ನೂ ಪಡೆಯುತ್ತಿದ್ದಾರೆ.