ಘಾಝಿಯಾಬಾದ್‌ನ ಪಟಾಕಿ ಗೋದಾಮಿಗೆ ಬೆಂಕಿ, ಐವರ ಸಜೀವ ದಹನ
Update: 2017-04-28 22:20 IST
ಘಾಝಿಯಾಬಾದ್,ಎ.28: ಇಲ್ಲಿಯ ಸಾಹಿಬಾಬಾದ್‌ನ ಫಾರುಖ್ ನಗರ ಗ್ರಾಮದಲ್ಲಿಯ ಪಟಾಕಿ ಗೋದಾಮಿನಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಐವರು ಸಜೀವ ದಹನಗೊಂಡಿದ್ದಾರೆ.
ಒಂದು ಗಂಟೆಯ ಸುಮಾರಿಗೆ ಬೆಂಕಿ ದುರಂತ ಸಂಭವಿಸಿದ್ದು, ಹತ್ತಕ್ಕೂ ಅಧಿಕ ಅಗ್ನಿಶಾಮಕ ಯಂತ್ರಗಳು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ಆರಿಸಿದವು.
ಗೋದಾಮಿನ ಮಾಲಕ ಪಪ್ಪು (55), ಕೆಲಸಗಾರರಾದ ಅಷ್ಫಾಕ್(40), ರಫೀಕ್(60), ಸಗೀರ್(40) ಮತ್ತು ಕುತುಬುದ್ದೀನ್(50) ಮೃತ ದುರ್ದೈವಿಗಳಾಗಿದ್ದಾರೆ.
ಯಾರೋ ಕೆಲಸಗಾರ ಸೇದಿ ಎಸೆದಿದ್ದ ಬೀಡಿ ತುಂಡಿನಿಂದಾಗಿ ಬೆಂಕಿ ಹತ್ತಿಕೊಂಡಿರ ಬಹುದು ಎಂದು ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದ್ದು, ಈ ಸಂದರ್ಭ ಮೃತರು ಗೋದಾಮಿನೊಳಗಿದ್ದರು.
ಪಟಾಕಿಗಳನ್ನು ದಾಸ್ತಾನಿಡಲು ಈ ಗೋದಾಮಿಗೆ ಅಗತ್ಯ ಅನುಮತಿಯಿತ್ತೇ ಎನ್ನುವುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.