ಪ್ರಧಾನಿ ಮೋದಿಗೆ ಬಳೆ ಖರೀದಿಸಿ ಎಂದು ಸ್ಮೃತಿಗೆ ಚೆಕ್ ಕಳಿಸಿದ ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟು
ಹೊಸದಿಲ್ಲಿ, ಎ.29: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಯಲ್ಲಿ 25 ಸಿಆರ್ ಪಿಎಫ್ ಜವಾನರ ಸಾವು ಹಾಗೂ ಜಮ್ಮು ಕಾಶ್ಮೀರದಲ್ಲಿ ಗುರುವಾರದಂದು ಉಗ್ರ ದಾಳಿಯಲ್ಲಿ ಮೂವರು ಯೋಧರ ಸಾವಿನಿಂದಾಗಿ ನರೇಂದ್ರ ಮೋದಿ ಸರಕಾರ ಸಾಕಷ್ಟು ಟೀಕೆಯೆದುರಿಸುವಂತಾಗಿದೆ.
ಗುರುವಾರ ಪ್ರಧಾನಿ ತಮ್ಮ ಟ್ವೀಟ್ ಮೂಲಕ ಹಿರಿಯ ನಟ ವಿನೋದ್ ಖನ್ನಾ ಸಾವಿಗೆ ಸಂತಾಪ ವ್ಯಕ್ತ ಪಡಿಸಿದಾಗ "ಕಾಶ್ಮೀರ ಯೋಧರ ಸಾವಿನ ಬಗ್ಗೆ ಏನೂ ಟ್ವೀಟ್ ಮಾಡದ ಪ್ರಧಾನಿ, ಅದೇ ಸಮಯ ಖನ್ನಾ ಸಾವಿಗೆ ಸಂತಾಪ ವ್ಯಕ್ತಪಡಿಸಲು ಮರೆತಿಲ್ಲವೇಕೆ" ಎಂದು ಹಲವರು ಪ್ರಶ್ನಿಸಿದ್ದರು.
ಮೋದಿ ಸರಕಾರದ ಅವಧಿಯಲ್ಲಿ ಭಾರತೀಯ ಯೋಧರ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹಲವರು ಮೋದಿಯ ಹಾಗೂ ಬಿಜೆಪಿ ನಾಯಕರ ಹಿಂದಿನ ಭಾಷಣಗಳನ್ನು ನೆನಪಿಸಿ ದಾಳಿಗಳಲ್ಲಿ ಯೋಧರು ಸಾವನ್ನಪ್ಪಿದಾಗಲೆಲ್ಲಾ ಅವರು ಯುಪಿಎ ಸರಕಾರದ ವಿರುದ್ಧ ನಡೆಸಿದ ವಾಗ್ದಾಳಿಗಳನ್ನು ನೆನಪಿಸಿದ್ದಾರೆ.
ಇದೀಗ ಲಕ್ನೋದ ಅಥ್ಲೀಟ್ ಅಜಿತ್ ವರ್ಮ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ 2013ರಲ್ಲಿ ತಾವು ಮಾಡಿದ್ದ ಭಾಷಣವೊಂದರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬಳೆಗಳನ್ನು ಕಳುಹಿಸುವುದಾಗಿ ಹೇಳಿದ್ದನ್ನು ಈಗ ನೆನಪಿಸಿದ್ದಾರೆ. ಅಷ್ಟೇ ಅಲ್ಲ, ಸ್ಮೃತಿ ಇರಾನಿಗೆ 1,000 ರೂ. ಮೌಲ್ಯದ ಚೆಕ್ ಕಳುಹಿಸಿ ಪ್ರಧಾನಿಗೆ ಬಳೆ ಖರೀದಿಸುವಂತೆ ಹೇಳಿದ್ದಾರೆ.
ವರ್ಮಾ ಅವರು ಏಷ್ಯನ್ ಕ್ರಾಸ್ ಕಂಟ್ರಿ ರೇಸಿನ ಬೆಳ್ಳಿ ಪದಕ ವಿಜೇತರಾಗಿದ್ದು, ಸ್ಪರ್ಶ್ ಸ್ಪೋರ್ಟ್ಸ್ ಡೆವಲೆಪ್ಮೆಂಟ್ ಫೌಂಡೇಶನ್ನಿನ ಸ್ಥಾಪಕರೂ ಆಗಿದ್ದಾರೆ.
‘‘ಕೇಂದ್ರದ ಕಾಂಗ್ರೆಸ್ ಸರಕಾರಕ್ಕೆ ಬಳೆಗಳನ್ನು ಕಳುಹಿಸಬೇಕೆಂದು ನನಗನಿಸುತ್ತದೆ. ಈ ಬಳೆಗಳನ್ನು ತೊಡುವಂತೆ ಅವರಿಗೆ ಹೇಳಬೇಕೆಂದು ನನಗನಿಸುತ್ತದೆ. ಪಾಕಿಸ್ತಾನದಿಂದ ಹತ್ತು ಹುಡುಗರು ಬಂದು ನಮ್ಮ ಪ್ರದೇಶದ ಮೇಲೆ ದಾಳಿ ನಡೆಸಿದಾಗ ಕಾಂಗ್ರೆಸ್ ಮೂಕ ಪ್ರೇಕ್ಷಕನಾಗಿದೆಯಲ್ಲದೆ ಪಕ್ಷವು ಪಾಕಿಸ್ತಾನದೊಂದಿಗೆ ಅಂಗಲಾಚುತ್ತಿದೆ’’ ಎಂದು ಸ್ಮತಿ 2013ರಲ್ಲಿ ನಡೆದ ಸಿಆರ್‌ಪಿಎಫ್ ಜವಾನರ ಹತ್ಯೆ ಘಟನೆಯ ಹಿನ್ನೆಲೆಯಲ್ಲಿ ತಮ್ಮ ಭಾಷಣವೊಂದರಲ್ಲಿ ಹೇಳಿದ್ದರು.