20 ದಿನಗಳಲ್ಲಿ 12,000 ಕಿ.ಮೀ. ಕ್ರಮಿಸಿ ಚೀನಾ ತಲುಪಿದ ರೈಲು

Update: 2017-04-29 14:32 GMT

ಬೀಜಿಂಗ್, ಎ. 29: ಬ್ರಿಟನ್‌ನಿಂದ ಔಷಧಿಗಳು, ಯಂತ್ರಗಳು, ವಿಸ್ಕಿ ಮತ್ತು ಮಕ್ಕಳ ಹಾಲು ಹೊತ್ತ ರೈಲು 12,000 ಕಿಲೋಮೀಟರ್ ಕ್ರಮಿಸಿ ಶನಿವಾರ ಪೂರ್ವ ಚೀನಾದ ಯಿವು ಪಟ್ಟಣವನ್ನು ತಲುಪಿದೆ. ಈ ಮೂಲಕ ಈ ಮಾರ್ಗವು ಜಗತ್ತಿನ ಎರಡನೆ ಅತಿ ಉದ್ದದ ರೈಲು ಮಾರ್ಗವಾಗಿ ದಾಖಲಾಗಿದೆ.

ಆಧುನಿಕ ಕಾಲದ ‘ರೇಶ್ಮೆ ಮಾರ್ಗ’ದ ಮೂಲಕ ಪಶ್ಚಿಮ ಯುರೋಪ್‌ನೊಂದಿಗೆ ಹೊಂದಿರುವ ವ್ಯಾಪಾರ ನಂಟುಗಳನ್ನು ಬಲಗೊಳಿಸುವ ಚೀನಾದ ಪ್ರಯತ್ನಗಳ ಫಲವಾಗಿ ಈ ರೈಲುಮಾರ್ಗ ರೂಪುಗೊಂಡಿದೆ.

‘‘ರೈಲು ಶನಿವಾರ ಬೆಳಗ್ಗೆ ಸುಮಾರು 9:30ಕ್ಕೆ ಯಿವು ತಲುಪಿದೆ’’ ಎಂದು ಯಿವು ತಿಯಾನ್‌ಮೆಂಗ್ ಇಂಡಸ್ಟ್ರಿ ಕಂಪೆನಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿತು.
ರೈಲು ಎಪ್ರಿಲ್ 10ರಂದು ಲಂಡನ್‌ನಿಂದ ಹೊರಟು ಫ್ರಾನ್ಸ್, ಬೆಲ್ಜಿಯಮ್, ಜರ್ಮನಿ, ಪೋಲ್ಯಾಂಡ್, ಬೆಲಾರುಸ್, ರಶ್ಯ ಮತ್ತು ಕಝಖ್‌ಸ್ತಾನ್‌ಗಳ ಮೂಲಕ ಪೂರ್ವ ಝೆಜಿಯಾಂಗ್ ಪ್ರಾಂತದ ಯಿವು ತಲುಪಿತು.

ಈ ರೈಲು ಮಾರ್ಗವು ರಶ್ಯದ ಪ್ರಸಿದ್ಧ ಟ್ರಾನ್ಸ್-ಸೈಬೀರಿಯನ್ ರೈಲು ಮಾರ್ಗಕ್ಕಿಂತ ಉದ್ದವಾಗಿದೆ, ಆದರೆ 2014ರಲ್ಲಿ ಆರಂಭಗೊಂಡ ಚೀನಾ-ಮ್ಯಾಡ್ರಿಡ್ ರೈಲು ಮಾರ್ಗಕ್ಕಿಂತ ಸುಮಾರು 1,000 ಕಿ.ಮೀ. ಕಿರಿದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News