ಆಕ್ರಮಿತ ಪ್ರದೇಶದಲ್ಲಿ ಇನ್ನೂ 15,000 ಮನೆ : ಇಸ್ರೇಲ್ ಘೋಷಣೆ

Update: 2017-04-29 15:16 GMT

ಜೆರುಸಲೇಂ, ಎ. 29: ಪೂರ್ವ ಜೆರುಸಲೇಂನಲ್ಲಿ 15,000 ಮನೆಗಳ ನೂತನ ಬಡಾವಣೆಯೊಂದನ್ನು ನಿರ್ಮಿಸುವ ಉದ್ದೇಶವನ್ನು ಇಸ್ರೇಲ್ ಹೊಂದಿದೆ ಎಂದು ಆ ದೇಶದ ವಸತಿ ಸಚಿವಾಲಯ ಶುಕ್ರವಾರ ಘೋಷಿಸಿದೆ.

ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ಕೊನೆಗಾಣಿಸುವ ನೂತನ ಉಪಕ್ರಮದ ಹಿನ್ನೆಲೆಯಲ್ಲಿ ನೂತನ ಬಡಾವಣೆ ನಿರ್ಮಾಣ ಯೋಜನೆಯನ್ನು ತಡೆಹಿಡಿಯುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಮನವಿಯ ಹೊರತಾಗಿಯೂ ಇಸ್ರೇಲ್ ಈ ಕ್ರಮವನ್ನು ತೆಗೆದುಕೊಂಡಿದೆ.

ಬಡಾವಣೆಗೆ ಸಂಬಂಧಿಸಿದ ಅಧಿಕೃತ ಯೋಜನೆಯು ಮುಂದಿನ ತಿಂಗಳು ಟ್ರಂಪ್ ಕೈಗೊಳ್ಳಲಿರುವ ಇಸ್ರೇಲ್ ಭೇಟಿಯ ವೇಳೆ ಪ್ರಕಟಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಇಡೀ ಜೆರುಸಲೇಂ ತನ್ನ ಖಾಯಂ ಹಾಗೂ ವಿಭಜಿಸಲಾಗದ ರಾಜಧಾನಿ ಎಂಬುದಾಗಿ ಇಸ್ರೇಲ್ ಪರಿಗಣಿಸಿದೆ. ಫೆಲೆಸ್ತೀನೀಯರು ಕೂಡ ಅಲ್ಲಿ ರಾಜಧಾನಿಯನ್ನು ಬಯಸುತ್ತಿದ್ದಾರೆ.

ಗೃಹ ನಿರ್ಮಾಣ ಯೋಜನೆಯ ಬಗ್ಗೆ ತನ್ನ ಸಚಿವಾಲಯ ಮತ್ತು ಜೆರುಸಲೇಂ ಮುನಿಸಿಪಾಲಿಟಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿವೆ ಎಂದು ವಸತಿ ಸಚಿವ ಯೋವ್ ಗಲಂಟ್ ಹೇಳಿದರು.

ವ್ಯವಸ್ಥಿತ ಉಲ್ಲಂಘನೆ

ಇಸ್ರೇಲ್‌ನ ಯೋಜನೆ ಅಂತಾರಾಷ್ಟ್ರೀಯ ಕಾನೂನಿನ ವ್ಯವಸ್ಥಿತ ಉಲ್ಲಂಘನೆಯಾಗಿದೆ ಹಾಗೂ ಮಾತುಕತೆಗಳನ್ನು ಪುನಾರಂಭಿಸುವ ಪ್ರಯತ್ನಗಳನ್ನು ಹಾಳುಗೆಡಹುವ ಉದ್ದೇಶಪೂರ್ವಕ ಕ್ರಮವಾಗಿದೆ ಎಂದು ಫೆಲೆಸ್ತೀನ್‌ನ ಮುಖ್ಯ ಸಂಧಾನಕಾರ ಸಯೀಬ್ ಇರೆಕಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News