ಸಿರಿಯದಲ್ಲಿ 45 ಭಾರಿ ರಾಸಾಯನಿಕ ಅಸ್ತ್ರಗಳ ಬಳಕೆ

Update: 2017-04-29 17:45 GMT

ದ ಹೇಗ್ (ನೆದರ್‌ಲ್ಯಾಂಡ್ಸ್), ಎ. 29: 2016ರ ಕೊನೆಯ ಭಾಗದಿಂದ ಸಿರಿಯದಲ್ಲಿ 45 ಭಾರಿ ರಾಸಾಯನಿಕ ಅಸ್ತ್ರಗಳನ್ನು ಬಳಸಲಾಗಿದೆ ಎಂಬ ವರದಿಗಳ ಬಗ್ಗೆ ರಾಸಾಯನಿಕ ಅಸ್ತ್ರಗಳನ್ನು ನಾಶಪಡಿಸುವ ಜವಾಬ್ದಾರಿ ಹೊಂದಿರುವ ಜಾಗತಿಕ ಸಂಸ್ಥೆ ‘ರಾಸಾಯನಿಕ ಅಸ್ತ್ರಗಳ ನಿಷೇಧ ಸಂಘಟನೆ (ಒಪಿಸಿಡಬ್ಲು)’ಯ ಪರಿಣತರು ತನಿಖೆ ನಡೆಸುತ್ತಿದ್ದಾರೆ.

ರಾಸಾಯನಿಕ ಅಸ್ತ್ರಗಳ ಬಳಕೆಯ ಬಗ್ಗೆ ಆರೋಪಗಳ ಬೃಹತ್ ಪಟ್ಟಿಯೇ ಇದೆ ಎಂದು ಸಂಘಟನೆಯ ಮಹಾನಿರ್ದೇಶಕ ಅಹ್ಮದ್ ಉಝುಮ್ಚು ಹೇಳಿದರು.
‘‘2016ರ ದ್ವಿತೀಯಾರ್ಧದಲ್ಲಿ ರಾಸಾಯನಿಕ ಅಸ್ತ್ರ ಪ್ರಯೋಗದ 30 ಘಟನೆಗಳು ಮತ್ತು ಈ ವರ್ಷದ ಆರಂಭದಿಂದ ಈವರೆಗೆ 15 ಘಟನೆಗಳು ಸಂಭವಿಸಿವೆ’’ ಎಂದು ಇಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಹಲವಾರು ಪುಟಗಳನ್ನು ಹೊಂದಿದ ಪಟ್ಟಿಯೊಂದನ್ನು ಪ್ರದರ್ಶಿಸುತ್ತಾ ಹೇಳಿದರು.

ಈ ಪಟ್ಟಿಯಲ್ಲಿ ಎಪ್ರಿಲ್ 4ರಂದು ಬಂಡುಕೋರರ ನಿಯಂತ್ರಣದ ಖಾನ್ ಶೇಖೂನ್ ಪಟ್ಟಣದ ಮೇಲೆ ನಡೆದ ಸರಿನ್ ವಿಷಾನಿಲ ದಾಳಿಯೂ ಸೇರಿದೆ. ಆ ದಾಳಿಯಲ್ಲಿ 31 ಮಕ್ಕಳು ಸೇರಿದಂತೆ 88 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

‘‘ಈ ಎಲ್ಲ ಆರೋಪಗಳನ್ನು ನಮ್ಮ ಪರಿಣತರು ದಾಖಲಿಸಿಕೊಂಡಿದ್ದಾರೆ. ಅವರು ಇವುಗಳ ಬಗ್ಗೆ ಪ್ರತಿ ದಿನ ನಮ್ಮ ಕಾರ್ಯಾಚರಣೆ ಕೇಂದ್ರದಿಂದ ಪರಿಶೀಲನೆ ನಡೆಸುತ್ತಿದ್ದಾರೆ’’ ಎಂದು ಉಝುಮ್ಚು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News