ದತ್ತು ತೆಗೆದುಕೊಳ್ಳಲು ಹೊಸ ನಿಯಮ ಜಾರಿ

Update: 2017-04-30 12:33 GMT

ಹೊಸದಿಲ್ಲಿ, ಎ.30: ಮಗುವನ್ನು ದತ್ತು ತೆಗೆದುಕೊಳ್ಳಬಯಸುವ ಭಾವೀ ಪೋಷಕರು ಇನ್ನು ಮುಂದೆ ತಮಗೆ ಬೇಕಾದ ಮಗುವನ್ನು ಆಯ್ದುಕೊಳ್ಳುವ ವ್ಯವಸ್ಥೆ ಇರುವುದಿಲ್ಲ. ರಾಷ್ಟ್ರೀಯ ದತ್ತು ಸಂಸ್ಥೆ ಸೂಚಿಸುವ ಮಗುವನ್ನು ದತ್ತು ತೆಗೆದುಕೊಳ್ಳುವ ಅಥವಾ ತಿರಸ್ಕರಿಸುವ ನೂತನ ನಿಯಮ ಜಾರಿಗೊಳಿಸಲಾಗಿದೆ. ಮೇ 1ರಿಂದ ಈ ನಿಯಮ ಜಾರಿಗೆ ಬರಲಿದೆ.

ಇದುವರೆಗೆ ಸರಕಾರದ ದತ್ತು ಜಾಲಪುಟ(ಪೋರ್ಟಲ್)ದಲ್ಲಿ ನೋಂದಣಿ ಮಾಡಿಕೊಂಡ ಪೋಷಕರಿಗೆ ಮೂರು ಮಗುವನ್ನು ಸೂಚಿಸಲಾಗುತ್ತಿತ್ತು ಮತ್ತು ಇದರಲ್ಲಿ ಒಂದು ಮಗುವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು.

    ದತ್ತು ತೆಗೆದುಕೊಳ್ಳುವ ಪ್ರಮಾಣ ಅತ್ಯಂತ ಕಡಿಮೆಯಾಗಿರುವ ಕಾರಣ ಮಗು ಸುದೀರ್ಘ ಕಾಲ ಸೂಚಿತ ಆವರ್ತದಲ್ಲಿ ಇರಬೇಕಿತ್ತು. ಹೊಸ ನಿಯಮದಂತೆ ಎಲ್ಲಾ ಮಕ್ಕಳನ್ನೂ ಸೂಚಿಸಲು ಅವಕಾಶವಿದೆ ಎಂದು ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರ(ಸಿಎಆರ್‌ಎ) ದ ಸಿಇಒ ಲೆ.ಕ. ದೀಪಕ್ ಕುಮಾರ್ ತಿಳಿಸಿದ್ದಾರೆ. ದತ್ತು ತೆಗೆದುಕೊಳ್ಳ ಬಯಸುವ ಪೋಷಕರು ಮೂರು ಸುತ್ತಿನ ಸೂಚನಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಪ್ರತೀ ಸುತ್ತಿನಲ್ಲೂ ಅವರಿಗೆ ಹೊಸದಾದ ಮಗುವಿನ ವಿವರ ಕಳಿಸಲಾಗುತ್ತದೆ. ಆಗಲೂ ಅವರು ಮಗುವನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಆಗ ಅವರ ಹೆಸರು ‘ವೈಟಿಂಗ್ ಲಿಸ್ಟ್’ನ ಕೊನೆಯ ಸ್ಥಾನಕ್ಕೆ ವರ್ಗಾವಣೆಯಾಗುತ್ತದೆ. ಮಗುವನ್ನು ಒಪ್ಪಿಕೊಳ್ಳಲು 48 ಗಂಟೆಗಳ ಅವಧಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಮಗು ಅವರಿಗೆ ಇಷ್ಟವಾದರೆ 20 ದಿನದ ಒಳಗೆ ಎಲ್ಲಾ ವಿಧಿವಿಧಾನ ಪೂರೈಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುತ್ತದೆ. ಸುಮಾರು 15000 ಪೋಷಕರು ಈ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಆದರೆ ಪೋರ್ಟಲ್‌ನ ದತ್ತು ವಿಭಾಗದಲ್ಲಿ ಇರುವ ಮಕ್ಕಳ ಸಂಖ್ಯೆ ಕೇವಲ 2000 ಮಾತ್ರ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News