ಉತ್ತರ ಪ್ರದೇಶದಲ್ಲೀಗ ಎಲ್ಲವೂ ಕೇಸರಿಮಯ....!

Update: 2017-04-30 14:06 GMT

ಲಕ್ನೋ,ಎ.30: ಉ.ಪ್ರದೇಶದಲ್ಲಿ ಪ್ರತಿ ಬಾರಿಯೂ ಸರಕಾರ ಬದಲಾದಾಗಲೆಲ್ಲ ಬದಲಾವಣೆಯೂ ಅನಿವಾರ್ಯ ಮತ್ತು ಈ ಬದಲಾವಣೆಯಾಗುವುದು ಬಣ್ಣದಲ್ಲಿ. ಈಗ ಆದಿತ್ಯನಾಥ್‌ರ ದರ್ಬಾರಿನಲ್ಲಿ ಜಾಕೆಟ್‌ಗಳು,ಸೀರೆಗಳಿಂದ ಹಿಡಿದು ಪೀಠೋಪಕರಣಗಳ ಹೊದಿಕೆಗಳು,ಟವೆಲ್‌ಗಳು.........ಅಷ್ಟೇ ಏಕೆ, ಮೈಕ್ರೋಫೋನ್‌ನ ವೈರ್ ಕೂಡ ಕೇಸರಿ ಬಣ್ಣದ್ದಾಗಿವೆ.

   ಮುಖ್ಯಮಂತ್ರಿ ಆದಿತ್ಯನಾಥ್ ಸರಕಾರದ ಸಚಿವರು ಮತ್ತು ಶಾಸಕರು ತಮ್ಮ ವರ್ಣ ನಿಷ್ಠೆಯನ್ನು ಪ್ರದರ್ಶಿಸುವ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ. ಸಚಿವರು ಕಿತ್ತಳೆ ಮತ್ತು ಕೇಸರಿ ಬಣ್ಣಗಳ ಖಾದಿಯ ನೆಹರು ಜಾಕೆಟ್ ಧರಿಸುವುದು ಮಾಮೂಲಾಗಿದ್ದರೆ ಮಹಿಳಾ ಸಚಿವರೂ ಕಡಿಮೆಯೇನಿಲ್ಲ. ಅವರೂ ಹೊಳೆಯುವ ಕೇಸರಿ ಅಥವ ಕಿತ್ತಳೆ ವರ್ಣದ ಸೀರೆಗಳಲ್ಲಿ ಮಿಂಚುತ್ತಿದ್ದಾರೆ. ಸಂಪುಟದಲ್ಲಿರುವ ಏಕೈಕ ಸಿಖ್ ಸಚಿವ ಬಲದೇವ ಓಲಖ್ ಅವರೂ ತಲೆಗೆ ಕೇಸರಿ ಬಣ್ಣದ ಟರ್ಬನ್ ಸುತ್ತಿಕೊಂಡಿರುವುದು ಆಗಾಗ್ಗೆ ಕಣ್ಣಿಗೆ ಬೀಳುತ್ತಿರುತ್ತಿದೆ.

ರಾಜ್ಯ ಸಂಪುಟದಲ್ಲಿರುವ ಏಕೈಕ ಮುಸ್ಲಿಂ ಸಚಿವ ಮೊಹ್ಸಿನ್ ರಝಾ ಕೂಡ ಈ ವರ್ಣ ನಿಷ್ಠೆಯ ಪ್ರದರ್ಶದಲ್ಲಿ ಹಿಂದೆ ಬಿದ್ದಿಲ್ಲ. ಕೇಸರಿ ಬಣ್ಣದ ವೇಸ್ಟ್‌ಕೋಟ್‌ಗಳನ್ನು ಬಳಸುವುದನ್ನು ಅವರು ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಜೊತೆಗೆ ಕೇಸರಿ ಕುರ್ತಾ ಕೂಡ ಇರುತ್ತದೆ.

ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ವೌರ್ಯ ಅವರ ಕಾರಿನ ಸೀಟ್ ಕವರ್‌ಗಳು ಹೊಳೆಯುವ ಕಿತ್ತಳೆ ಬಣ್ಣದಾಗಿದ್ದರೆ, ಹೆಚ್ಚಿನ ಸಚಿವರ ಹಣೆಯಲ್ಲಿ ಕೇಸರಿ ತಿಲಕ ರಾರಾಜಿಸುತ್ತಿರುತ್ತದೆ.

ಅಂದ ಹಾಗೆ ಉತ್ತರ ಪ್ರದೇಶದಲ್ಲಿ ಬಣ್ಣಕ್ಕೆ ಯಾವಾಗಲೂ ಪ್ರಾಮುಖ್ಯವಿದೆ. ಹಿಂದೆ ಮಾಯಾವತಿ ಸರಕಾರವಿದ್ದಾಗ ಎಲ್ಲೆಲ್ಲಿಯೂ ನೀಲಿ ಬಣ್ಣವೇ ಕಣ್ಣು ಕುಕ್ಕುತ್ತಿತ್ತು. ಸಮಾಜವಾದಿ ಪಕ್ಷದ ಸರಕಾರವಿದ್ದಾಗ ಉಜ್ವಲ ಕೆಂಪು ಮತ್ತು ಹಸಿರು ಬಣ್ಣಗಳು ಕಂಗೊಳಿಸುತ್ತಿದ್ದವು. ಈಗ ಬಿಜಪಿ ಆಡಳಿತದೊಂದಿಗೆ ಕೇಸರಿ ಬಣ್ಣದ ಸರದಿ.

ಆದಿತ್ಯನಾಥ್ ಅವರು ಸದಾ ಧರಿಸುವುದು ಕೇಸರಿ ಬಟ್ಟೆಗಳನ್ನು. ಹೀಗಾಗಿ ಅವರು ಕುಳಿತುಕೊಳ್ಳುವ ಖುರ್ಚಿಗಳು, ಸೋಫಾಗಳು ಎಲ್ಲವೂ ಕೇಸರಿ ಅಥವಾ ಕಿತ್ತಳೆ ಬಣ್ಣದ ಹೊದಿಕೆಗಳನ್ನು ಧರಿಸಿಕೊಂಡಿವೆ. ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾತನಾಡುವುದಿದ್ದರೆ ಅಧಿಕಾರಿಗಳು ಮೈಕ್ರೋಫೋನ್‌ನ ವೈರ್‌ಗಳಿಗೂ ಕೇಸರಿ ರಿಬ್ಬನ್ ಸುತ್ತುತ್ತಾರೆ!

ಆದಿತ್ಯನಾಥ್ ಇತ್ತೀಚಿಗೆ ಸರಕಾರದ ಕಾರ್ಯಗಳ ಪರಿಶೀಲನೆಗೆಂದು ಮೊದಲ ಬಾರಿಗೆ ರಾಜಧಾನಿಯಿಂದ ಹೊರಗೆ....ಬುಂದೇಲಖಂಡ್‌ಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದಾಗ ಅವರು ಅಲ್ಲಿ ಇಳಿಯುತ್ತಿದ್ದಂತೆ ದಾಹವಾರಿಸಿಕೊಳ್ಳಲು ಅಧಿಕಾರಿಗಳು ನೀಡಿದ್ದ ತಂಪು ಪಾನೀಯವೂ ಕಿತ್ತಳೆ ಬಣ್ಣದ್ದಾಗಿತ್ತು !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News