ಚಂದ್ರನಲ್ಲಿ ಹಳ್ಳಿ ಸ್ಥಾಪಿಸಲು ಚೀನಾ, ಯುರೋಪ್ ಜಂಟಿ ಯೋಜನೆ

Update: 2017-04-30 14:51 GMT

ಲಂಡನ್, ಎ. 30: ಚಂದ್ರನಲ್ಲಿ ಹಳ್ಳಿಯೊಂದನ್ನು ನಿರ್ಮಿಸುವ ಬಗ್ಗೆ ಚೀನಾ ಮತ್ತು ಯುರೋಪ್ ಯೋಜನೆಯೊಂದನ್ನು ರೂಪಿಸುತ್ತಿವೆ. ಮಂಗಳ ಗ್ರಹ ಸೇರಿದಂತೆ ಆಳ ಬಾಹ್ಯಾಕಾಶಕ್ಕೆ ಗಗನನೌಕೆಗಳನ್ನು ಕಳುಹಿಸಲು ಅಥವಾ ಬಾಹ್ಯಾಕಾಶ ಪ್ರವಾಸೋದ್ಯಮ ಮತ್ತು ಚಂದ್ರ ಗಣಿಗಾರಿಕೆಗಾಗಿಯೂ ಈ ಹಳ್ಳಿಯನ್ನು ಬಳಸಬಹುದಾಗಿದೆ.

ಚಂದ್ರನಲ್ಲಿ ನೆಲೆಯೊಂದನ್ನು ಸ್ಥಾಪಿಸುವ ಬಗ್ಗೆ ಹಾಗೂ ಇತರ ಸಂಭಾವ್ಯ ಜಂಟಿ ಉಪಕ್ರಮಗಳ ಬಗ್ಗೆ ಯಾವ ರೀತಿಯಲ್ಲಿ ಕೈಜೋಡಿಸಬಹುದು ಎಂಬ ಬಗ್ಗೆ ಚೀನಾ ಮತ್ತು ಯುರೋಪಿನ್ ಬಾಹ್ಯಾಕಾಶ ಸಂಸ್ಥೆಗಳ ಪ್ರತಿನಿಧಿಗಳು ಚರ್ಚಿಸಿದ್ದಾರೆ.

ಚೀನಾದ ಬಾಹ್ಯಾಕಾಶ ಸಂಸ್ಥೆಯ ಮಹಾಕಾರ್ಯದರ್ಶಿ ತಿಯಾನ್ ಯುಲಾಂಗ್ ಈ ಯೋಜನೆಯ ಬಗ್ಗೆ ಪ್ರಥಮವಾಗಿ ಮಾಹಿತಿ ನೀಡಿದ್ದಾರೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ)ಯ ವಕ್ತಾರ ಪಾಲ್ ಹವಿಸ್ಟೆಂಡಾಲ್ ಇದನ್ನು ಖಚಿತಪಡಿಸಿದ್ದಾರೆ.

‘‘ಅರುವತ್ತರ ದಶಕದ ಬಾಹ್ಯಾಕಾಶ ಸ್ಪರ್ಧೆಯ ಬಳಿಕ ಬಾಹ್ಯಾಕಾಶ ಬದಲಾಗಿದೆ. ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶದ ಅನ್ವೇಷಣೆ ನಡೆಸುವುದಕ್ಕಾಗಿ ಅಂತಾರಾಷ್ಟ್ರೀಯ ಸಹಕಾರದ ಅಗತ್ಯವನ್ನು ನಾವು ಮನಗಂಡಿದ್ದೇವೆ’’ ಎಂದು ಹವಿಸ್ಟೆಂಡಾಲ್ ಹೇಳಿರುವುದಾಗಿ ‘ಇಂಡಿಪೆಂಡೆಂಟ್’ ವರದಿ ಮಾಡಿದೆ.

‘‘ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರ ಕಾರ್ಯಕ್ರಮ ಈಗಾಗಲೇ ಚೀನಾದಲ್ಲಿ ಚಾಲ್ತಿಯಲ್ಲಿದೆ’’ ಎಂದು ಅವರು ಹೇಳಿದರು.
ಪ್ರಸ್ತಾಪಿತ ‘ಚಂದ್ರ ಹಳ್ಳಿ’ಯನ್ನು ಭವಿಷ್ಯದ ಮಂಗಳ ಗ್ರಹದ ಸಂಶೋಧನೆಗಳಿಗಾಗಿ ಹಾಗೂ ಸಂಭಾವ್ಯ ಬಾಹ್ಯಾಕಾಶ ಪ್ರವಾಸೋದ್ಯಮಕ್ಕಾಗಿ ಅಥವಾ ಚಂದ್ರ ಗ್ರಹದ ಗಣಿಗಾರಿಕೆಗಾಗಿಯೂ ಬಳಸಬಹುದಾಗಿದೆ ಎಂಬುದಾಗಿ 22 ಸದಸ್ಯರ ಇಎಸ್‌ಎಯ ಮಹಾನಿರ್ದೇಶಕ ಜೊಹಾನ್-ಡಯಟ್ರಿಕ್ ವೋರ್ನರ್ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News