ಉ.ಪ್ರ.ಮುಖ್ಯಮಂತ್ರಿಯೊಂದಿಗೆ ವೇದಿಕೆ ಹಂಚಿಕೊಂಡ ಕೊಲೆ ಆರೋಪಿ ಶಾಸಕ

Update: 2017-04-30 15:47 GMT

ಗೋರಖ್‌ಪುರ,ಎ.30: ಶನಿವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊಲೆ ಆರೋಪಿ ಶಾಸಕ ಅಮನಮಣಿ ತ್ರಿಪಾಠಿ ಮುಖ್ಯಮಂತ್ರಿ ಆದಿತ್ಯನಾಥ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದಲ್ಲದೆ, ಅವರ ಕಾಲಿಗೆ ಬಿದ್ದು ಆಶೀರ್ವಾದವನ್ನೂ ಕೋರಿದ್ದರು.

ನೆರೆಯ ಮಹಾರಾಜಗಂಜ್ ಜಿಲ್ಲೆಯ ನೌತನ್ವಾ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕರಾಗಿರುವ ತ್ರಿಪಾಠಿ (35) ತಲೆಯ ಮೇಲೆ ತನ್ನ ಪತ್ನಿ ಸಾರಾ ಹತ್ಯೆ ಆರೋಪವಿದೆ.ತ್ರಿಪಾಠಿ ಆದಿತ್ಯನಾಥ್ ಜೊತೆ ಸಂಕ್ಷಿಪ್ತ ಸಂವಾದದ ವೇಳೆ ಕೆಲವು ಕಾಗದ ಪತ್ರಗಳನ್ನು ಅವರಿಗೆ ನೀಡಿದ್ದರು.

ತ್ರಿಪಾಠಿ ಮುಖ್ಯಮಂತ್ರಿಗಳ ಕಾಲುಗಳನ್ನು ಮುಟ್ಟಿ ನಮಸ್ಕರಿಸಿದ್ದು ತನಗೆ ನಂತರ ಗೊತ್ತಾಯಿತು ಎಂದು ಕಾರ್ಯಕ್ರಮದ ಸಿದ್ಧತೆಯ ಉಸ್ತುವಾರಿ ಹೊತ್ತಿದ್ದ ಕಾಂಪಿಯರಗಂಜ್ ಶಾಸಕ ಫತೇ ಬಹದೂರ್ ಸಿಂಗ್ ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆಗೆ ತಾನು ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಪದೇ ಪದೇ ಹೇಳಿಕೊಳ್ಳುತ್ತಿರುವ ಆದಿತ್ಯನಾಥ್ ಜೊತೆ ತ್ರಿಪಾಠಿ ವೇದಿಕೆಯನ್ನು ಹಂಚಿಕೊಂಡಿದ್ದು ಬಿಜೆಪಿ ಕಾರ್ಯಕರ್ತರಲ್ಲೂ ಅಚ್ಚರಿ ಮೂಡಿಸಿತ್ತು.

ಯಾವುದೇ ಜನಪ್ರತಿನಿಧಿ ಮುಖ್ಯಮಂತ್ರಿಗಳಿಗೆ ಶುಭಾಶಯ ಸಲ್ಲಿಸಬಹುದು ಮತ್ತು ಅವರ ಕಾಲು ಮುಟ್ಟಿ ನಮಸ್ಕರಿಸಬಹುದು.ಅದರಲ್ಲೇನೂ ತಪ್ಪಿಲ್ಲ ಎಂದು ಬಿಜೆಪಿ ಗೋರಖ್‌ಪುರ ಘಟಕದ ವಕ್ತಾರ ಸತ್ಯೇಂದ್ರ ಸಿಂಗ್ ಸಮಜಾಯಿಷಿ ನೀಡಿದ್ದಾರೆ.

 ತ್ರಿಪಾಠಿಯ ತಂದೆ ಅಮರಮಣಿ ತ್ರಿಪಾಠಿ ನೌತನ್ವಾದಿಂದ ನಾಲ್ಕು ಬಾರಿ ಶಾಸಕರಾಗಿದು,್ದ ಮುಲಾಯಂ ಸಿಂಗ್ ನೇತೃತ್ವದ ಎಸ್‌ಪಿ ಸರಕಾರದಲ್ಲಿ ಸಚಿವರೂ ಆಗಿದ್ದರು. ಅವರೀಗ ಮಧುಮಿತಾ ಶುಕ್ಲಾ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News