ಆಸ್ಪತ್ರೆಗೆ ಬಾಂಬು ಬೆದರಿಕೆ ಸಂದೇಶ ರವಾನಿಸಿದ 7ವರ್ಷದ ಪೋರ !
ತೃಶೂರ್(ಕೇರಳ), ಮೇ. 1: ಜನರಲ್ ಆಸ್ಪತ್ರೆಗೆ ಬಾಂಬು ಇರಿಸಲಾಗಿದೆಎಂದು ಏಳು ವರ್ಷದ ಪುಟ್ಟ ಹುಡುಗ ಸಂದೇಶ ಕಳುಹಿಸಿ ಪೊಲೀಸರ ನೆಮ್ಮದಿ ಕೆಡಿಸಿದ್ದಾನೆ. ಪೊಲೀಸರು, ಬಾಂಬ್ ನಿಷ್ಕ್ರಿಯ ಸ್ಕ್ವಾಡ್ ಆಸ್ಪತ್ರೆಗೆ ಬಂದು ತಪಾಸಣೆ ನಡೆಸಿದರೂ ಏನೂ ಸಿಗಲಿಲ್ಲ. ಫೋನ್‌ಸಂದೇಶವನ್ನು ಸೈಬರ್ ಸೆಲ್ ಪರಿಶೀಲನೆ ನಡೆಸಿದಾಗ ಪಾಲಕ್ಕಾಡ್ ತೃತ್ತಾಲ ಎಂಬಲ್ಲಿಂದ ಏಳು ವರ್ಷದ ಬಾಲಕ ಸಂದೇಶ ಕಳುಹಿಸಿದ್ದು ಪತ್ತೆಯಾಗಿದೆ.
ರವಿವಾರ ಹತ್ತುಗಂಟೆಗೆ ಘಟನೆ ನಡಿದಿದೆ. ತೃಶೂರ್ ಪಿಂಕ್ ಪೊಲೀಸ್ ಟೋಲ್‌ಫ್ರೀ ನಂಬರ್‌ಗೆ ಸಂದೇಶ ಬಂದಿತ್ತು. ಕೂಡಲೇ ಬಾಂಬ್ ಸ್ಕ್ವಾಡ್ ಆಸ್ಪತ್ರೆಗೆ ಧಾವಿಸಿ ತಪಾಸಣೆ ನಡೆಸಿತು. ಪೊಲೀಸ್ ನಾಯಿ, ಮೆಟಲ್ ಡಿಟೆಕ್ಟರ್ ಸಹಿತ ಪೊಲೀಸರು ತಪಾಸಣೆಗಿಳಿದರು. ರೋಗಿಗಳು ಇದನ್ನು ನೋಡಿ ದಂಗಾಗಿನಿಂತರು. ಹಲವರು ಆಸ್ಪತ್ರೆಯಿಂದ ಹೊರಗೆ ಹೋಗಿ ನಿಂತರು. ಹೊರಹೋಗುವ ಬಾಗಿಲುಗಳನ್ನು ತೆರೆದು ತುರ್ತು ರಕ್ಷಣಾ ಕಾರ್ಯವನ್ನು ಪೊಲೀಸರು ಸಜ್ಜುಗೊಳಿಸಿದರು. ಗಂಟೆಗಟ್ಟಲೆಕಾಲ ಹುಡುಕಿದರೂ ಬಾಂಬ್ ಸಿಕ್ಕಿಲ್ಲ. ನಂತರ ನಡೆದ ತನಿಖೆಯಲ್ಲಿ ಮಗು ಸಿಕ್ಕಿಬಿದ್ದಿದೆ. ತೃಶೂರ್‌ನ ಕುಟ್ಟೂರಿನ ಸಂಬಂಧಿಕರ ಮನೆಯಲ್ಲಿದ್ದ ಮಗುಮತ್ತು ಹೆತ್ತವರನ್ನು ಕರೆಯಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಕಂಟ್ರೋಲ್ ರೂಂ ಪೊಲೀಸರು ಹೇಳಿದ್ದಾರೆ. ಆದರೆ ಈ ಪ್ರಕರಣ ಇಲ್ಲಿಗೆ ಕೊನೆಗೊಂಡಿಲ್ಲ ಈ ಕುರಿತು ತನಿಖೆ ನಡೆಯಲಿದೆ ಎಂದು ತೃಶೂರ್ ಈಸ್ಟ್ ಪೊಲೀಸರು ತಿಳಿಸಿದ್ದಾರೆ.