ಜನರು ತೊಟ್ಟಿಗೆಸೆಯುವ ಆಹಾರವನ್ನು ನನಗೆ ಕೊಟ್ಟರೆ ಸಾಕಿತ್ತು : ಹಸನ್

Update: 2017-05-01 07:37 GMT

ನನ್ನ ಹಳ್ಳಿಯಿಂದ ನಾನಿಲ್ಲಿಗೆ ಬಂದಾಗ ನನಗೆ ಏಳು ವರ್ಷ ವಯಸ್ಸು. ಒಂದು ತುಂಡು ಬ್ರೆಡ್ ಪಡೆಯಲು ನಾನು ನಾಯಿಯಾಗಬೇಕಾಯಿತು. ಆಗಸದತ್ತ ನಾನು ದೃಷ್ಟಿ ನೆಟ್ಟಾಗಲೆಲ್ಲಾ ನನ್ನ ಜಗತ್ತು ಬಹಳ ಬೇಗ ತಿರುಗುತ್ತಿದೆ ಎಂದು ನನಗನಿಸುತ್ತಿತ್ತು, ನನ್ನ ಸುತ್ತಲಿನ ಎಲ್ಲವೂ ಮಸುಕಾದಂತೆ ಅನಿಸುತ್ತಿತ್ತು.

ನಾನು ಕಸದ ತೊಟ್ಟಿಯತ್ತ ನೋಡಿದೆ, ಜನರು ಆಹಾರ ಮತ್ತು ತ್ಯಾಜ್ಯಗಳನ್ನು ಅಲ್ಲಿ ಎಸೆಯುತ್ತಿರುವುದನ್ನು ನೋಡಿದೆ. ಓಡಿ ಹೋಗಿ ಅವರ ಕೈಯ್ಯಲ್ಲಿದ್ದ ಅಳಿದುಳಿದ ಆಹಾರವನ್ನು ಸೆಳೆಯಬೇಕೆಂದು ನನಗನಿಸುತ್ತಿತ್ತು. ಆ ಎಲ್ಲಾ ಆಹಾರ ಸೇವಿಸಿದರೆ ಎಷ್ಟು ಚೆನ್ನಾಗಿತ್ತು ಎಂದು ನಾನು ಯೋಚಿಸುತ್ತಿದ್ದೆ. ‘ಅದನ್ನು ಬಿಸಾಡಬೇಡಿ’ ‘ದಯವಿಟ್ಟು ನನಗೆ ಕೊಟ್ಟು ಬಿಡಿ’ ಎಂದು ಅವರಿಗೆ ಹೇಳಬೇಕೆಂದು ನನಗನಿಸುತ್ತಿತ್ತು.

ಆದರೆ ಜನರೆಲ್ಲಾ ನನಗೆ ಅಪರಿಚಿತರಾಗಿದ್ದರು. ಬೀದಿ ನಾಯಿಯನ್ನು ನೋಡಿದಂತೆ ಅವರು ನನ್ನನ್ನು ನೋಡುತ್ತಿದ್ದರು. ಎರಡು ಹಗಲು ಎರಡು ರಾತ್ರಿ ನಾನು ಹಸಿದಿದ್ದೆ. ನಾನು ಸ್ವಲ್ಪವೇ ನೀರು ಕುಡಿದಿದ್ದೆ, ನೀರು ಸೇವಿಸದಾಗಲೆಲ್ಲಾ ವಾಕರಿಕೆ ಬಂದಂತಾಗುತ್ತಿತ್ತು. ನೀರು ಕಹಿಯಾದಂತೆ ಅನಿಸುತ್ತಿತ್ತು ಹಾಗೂ ನಾನು ಆಹಾರಕ್ಕಾಗಿ ಹಗಲುಗನಸು ಕಾಣುತ್ತಿದ್ದೆ.

ನಂತರ ನಾನು ಗುತ್ತಿಗೆದಾರನ ಬಳಿ ಹೋಗಿ ಐನೂರು ಇಟ್ಟಿಗೆಗಳನ್ನು ಸಾಗಿಸಲು ಶಕ್ತನಾಗಿದ್ದೇನೆಂದು ಹೇಳಿದೆ ಹಾಗೂ ಆತ ನನಗೆ ಸ್ವಲ್ಪ ಆಹಾರ ನೀಡಿದರೆ ಸಾಕೆಂದು ಹೇಳಿದೆ. ಆತ ನನ್ನನ್ನು ನೋಡಿ ನನ್ನಿಂದ ಆತನಿಗೆ ಏನೂ ಪ್ರಯೋಜನವಿಲ್ಲ, ಏಕೆಂದರೆ ನನ್ನ ದೇಹದ ಮೂಳೆಗಳನ್ನು ಆತ ಲೆಕ್ಕ ಮಾಡಬಲ್ಲ ಎಂದು ಹೇಳಿ ಬಿಟ್ಟ.

ಆತ ನನ್ನಲ್ಲಿ ಏನು ನೋಡಿದ ಎನ್ನುವುದು ನನಗೆ ಗೊತ್ತಿಲ್ಲ. ಆದರೂ ಒಂದು ಅವಕಾಶ ಆತ ನನಗೆ ನೀಡಿದ. ಆ ದಿನ ನಾನು ಆಹಾರ ಸೇವಿಸುವಾಗ, ಆಹಾರವಿಲ್ಲದೆ ಈ ಲೋಕದಲ್ಲಿ ಯಾವುದಕ್ಕೂ ಅರ್ಥವಿಲ್ಲ ಎಂದು ನನಗೆ ಅನಿಸಿತು. ನಾನು ದೊಡ್ಡವನಾದ ಮೇಲೆ ಏನಾಗಬೇಕೆಂದಿದ್ದೇನೆ ಎಂದು ನನ್ನ ಗುತ್ತಿಗೆದಾರ ಕೇಳಿದ.

ನಾನು ನನ್ನ ತಟ್ಟೆಯನ್ನು ಮುಟ್ಟಿ ‘‘ ನಾನು ದೊಡ್ಡವನಾದಾಗ ನನ್ನ ಆಹಾರವನ್ನು ಹಂಚುತ್ತೇನೆ,’’ ಎಂದು ಬಿಟ್ಟೆ. ಅಂದಿನಿಂದ ಈಗ ಇಪ್ಪತ್ತು ವರ್ಷಗಳಾಗಿವೆ. ಪ್ರತಿ ದಿನ ನಾನು ಇಬ್ಬರು ಹಸಿದ ಮಕ್ಕಳಿಗೆ ಆಹಾರ ನೀಡುತ್ತಿದ್ದೇನೆ, ಒಬ್ಬರಿಗೆ ಮಧ್ಯಾಹ್ನ ಹಾಗೂ ಇನ್ನೊಬ್ಬರಿಗೆ ರಾತ್ರಿಯ ಊಟ. ಈ ಹಸಿದ ಮಕ್ಕಳು ನನ್ನ ಬಳಿ ಎಲ್ಲಿಂದ ಬಂದರೆಂದು ನನಗೆ ಗೊತ್ತಿಲ್ಲ. ಒಂದು ಬಾರಿ ಮಾತ್ರ ಅವರಿಗೆ ಸ್ವಾಗತವಿದೆ ಎಂದು ಅವರಿಗೂ ಗೊತ್ತು.

ಆಹಾರ ಸೇವಿಸಿದ ಮೇಲೆ ಪಾಗ್ಲ ಹಸನ್ ಹೆಸರಿನಲ್ಲಿ ಅವರಿಗೆ ಆಹಾರ ನೀಡಲಾಗುತ್ತಿದೆ ಎನ್ನಲಾಗುತ್ತದೆ. ಆದರೆ ನಾನೇ ಆ ಹಸನ್ ಎಂದು ಅವರಿಗೆ ತಿಳಿದಿಲ್ಲ. ಆದರೆ ಹಸಿದ ಮಕ್ಕಳಿಗೆ ಆಹಾರ ನೀಡುವ ಹಸನ್ ಎಂಬ ಒಬ್ಬ ವ್ಯಕ್ತಿ ಇದ್ದಾನೆ ಎಂದಷ್ಟೇ ಅವರಿಗೆ ಗೊತ್ತು.

ನನ್ನ ಆಹಾರವನ್ನು ಪ್ರತಿ ಬಾರಿ ಮುಟ್ಟಿದಾಗಲೂ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ. ಹಸಿವಿಗಿಂತ ದೊಡ್ಡ ನೋವಿಲ್ಲ. ಈ ಮಕ್ಕಳು ನನ್ನ ಬಳಿ ಕುಳಿತು ಆಹಾರ ಸೇವಿಸಿದಾಗ ಅವರಲ್ಲಿ ನಾನು ನನ್ನನ್ನು ಕಾಣುತ್ತೇನೆ. ಅವರು ಆಹಾರ ಸೇವಿಸಿದ ನಂತರ ದೊಡ್ಡದಾಗಿ ತೇಗು ತೆಗೆದು ನಕ್ಕಾಗ ನನಗೆ ಸಮಾಧಾನವಾಗುತ್ತದೆ. ಹಸಿದ ಹೊಟ್ಟೆಗೆ ಎರಡು ಅಗಳು ಅನ್ನ ಎಷ್ಟು ಮೌಲ್ಯಯುತವಾದದ್ದು ಎಂದು ಈ ಜಗತ್ತಿನ ಜನರಿಗೆ ತಿಳಿದಿಲ್ಲ

- ಹಸನ್

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News