×
Ad

ಮೊದಲ ಬಾರಿಗೆ ಸ್ಕೈಪ್ ಮೂಲಕ ವಿವಾಹ ವಿಚ್ಛೇದನಕ್ಕೆ ಅಸ್ತು ಎಂದ ಪುಣೆ ನ್ಯಾಯಾಲಯ

Update: 2017-05-01 14:17 IST

ಪುಣೆ,ಮೇ 1: ಸಿವಿಲ್ ನ್ಯಾಯಾಲಯದ ಕೌಟುಂಬಿಕ ವಿವಾದಗಳ ವಿಚಾರಣೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪುಣೆಯ ನ್ಯಾಯಾಲಯವು ಆನ್‌ಲೈನ್ ಕರೆ ಸೌಲಭ್ಯ (ಸ್ಕೈಪ್)ವನ್ನು ಬಳಸಿಕೊಂಡು ವಿವಾಹ ವಿಚ್ಛೇದನಕ್ಕೆ ಅಸ್ತು ಎಂದಿದೆ.

ಸಿಂಗಾಪುರದಲ್ಲಿರುವ ವರ ನ್ಯಾಯಾಲಯದಲ್ಲಿ ತನ್ನ ಹೇಳಿಕೆ ನೀಡಲು ಶನಿವಾರ ಪುಣೆಗೆ ಬಂದಿಳಿದಿದ್ದ. ಆದರೆ ಲಂಡನ್‌ನಲ್ಲಿರುವ ಪತ್ನಿಗೆ ಉದ್ಯೋಗದ ಕಟ್ಟುಪಾಡು ಗಳಿಂದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಅವಕಾಶವನ್ನು ಬಳಸಿಕೊಂಡ ನ್ಯಾಯಾಲಯ ಈ ಹಿಂದೆಂದೂ ಕಂಡಿರದಿದ್ದ ಕ್ರಮಕ್ಕೆ ಮುಂದಾಗಿ, ಸ್ಕೈಪ್ ಮೂಲಕ ತನ್ನ ಹೇಳಿಕೆಯನ್ನು ಮಂಡಿಸಲು ಪತ್ನಿಗೆ ಅವಕಾಶ ನೀಡಿತು.

ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹ ವಿಚ್ಛೇದನವನ್ನು ಕೋರಿ 2016, ಆ.12ರಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ತಮ್ಮ ವಿವಾಹ ಮುರಿದು ಬೀಳುವುದಕ್ಕೆ ಕಾರಣವನ್ನು ವಿವರಿಸಿದ್ದರು.

ಈ ಜೋಡಿ ಒಂದೇ ಕಾಲೇಜಿನಲ್ಲಿ ಓದಿದ್ದು, ಪರಸ್ಪರ ಪ್ರೇಮಿಸುತ್ತಿದ್ದರು. ಹಿಂದು ಸಂಪ್ರದಾಯದ ಪ್ರಕಾರ 2015, ಮೇ 9ರಂದು ಅಮರಾವತಿಯಲ್ಲಿ ಮದುವೆಯನ್ನು ಮಾಡಿಕೊಂಡಿದ್ದರು. ಕೆಲವೇ ಸಮಯದಲ್ಲಿ ಪುಣೆಗೆ ಸ್ಥಳಾಂತರಗೊಂಡು ಹಿಂಜೆವಾಡಿ ಯಲ್ಲಿ ಎರಡು ಪ್ರತ್ಯೇಕ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಜೊತೆಗೆ ವಾಸಕ್ಕೆ ಫ್ಲಾಟೊಂದನ್ನೂ ಖರೀದಿಸಿದ್ದರು.

 ಇದಾಗಿ ಒಂದೇ ತಿಂಗಳ ಬಳಿಕ ಇಬ್ಬರಿಗೂ ವಿದೇಶಗಳಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬಂದಿತ್ತು. ಪತಿ ಸಿಂಗಾಪುರದ ಉದ್ಯೋಗ ಆಯ್ಕೆ ಮಾಡಿಕೊಂಡರೆ,ಲಂಡನ್ನಿನಲ್ಲಿ ಉದ್ಯೋಗ ದೊರಕಿದ್ದರೂ ಪತ್ನಿಗೆ ಅಲ್ಲಿಗೆ ತೆರಳಲಾಗಿರಲಿಲ್ಲ. ಮದುವೆ ತನ್ನ ವೃತ್ತಿಜೀವನಕ್ಕೆ ತಡೆಯೊಡ್ಡುತ್ತಿದೆ ಎಂಬ ಬೇಸರ ಪತ್ನಿಯಲ್ಲಿ ಮನೆ ಮಾಡಿತ್ತು. ಇದು ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿಗೆ ನಾಂದಿ ಹಾಡಿತ್ತು. 2015,ಜೂ.30ರಿಂದ ಪ್ರತ್ಯೇಕವಾಗಿ ವಾಸವಾಗಿದ್ದ ಅವರು ಬಳಿಕ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಪತ್ನಿ ಕೂಡ ಲಂಡನ್‌ಗೆ ತೆರಳಿದ್ದಳು.

ಶನಿವಾರ ಪತಿ ನ್ಯಾಯಾಲಯದಲ್ಲಿ ಹಾಜರಿದ್ದು, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪತ್ನಿಯ ಹೇಳಿಕೆ ಪಡೆದ ನ್ಯಾಯಾಲಯ ಅವರಿಬ್ಬರ ವಿಚ್ಛೇದನಕ್ಕೆ ಹಸಿರು ನಿಶಾನೆ ತೋರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News