ಆಧ್ಯಾತ್ಮಿಕತೆಯ ಕೊರತೆಯಿಂದ ರೈತರ ಆತ್ಮಹತ್ಯೆ ಎಂದ ರವಿಶಂಕರ್ ಗುರೂಜಿ!

Update: 2017-05-01 11:38 GMT

ಹೊಸದಿಲ್ಲಿ,ಮೇ.1 : ಆಧ್ಯಾತ್ಮಿಕತೆಯ ಕೊರತೆಯೇ ರೈತರ ಆತ್ಮಹತ್ಯೆಯ ಹಿಂದಿನ ಕಾರಣಗಳಲ್ಲೊಂದಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀ ಶ್ರೀ ರವಿ ಶಂಕರ್ ಗುರೂಜಿ ಹೇಳಿದ್ದಾರೆ.

ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತಿದ್ದ ಸಂದರ್ಭ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ ವರದಿಯಾಗುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಕೇಳಿದಾಗ ಮೇಲಿನಂತೆ ಹೇಳಿದರು ‘‘ನಾವು ವಿದರ್ಭದ 512 ಗ್ರಾಮಗಳಲ್ಲಿ ಪಾದಯಾತ್ರೆ ಕೈಗೊಂಡಿದ್ದೇವೆ. ಬಡತನವೊಂದೇ ರೈತರ ಆತ್ಮಹತ್ಯೆಗಳಿಗೆ ಕಾರಣವಲ್ಲ ಎಂದು ಆಗ ನಮಗೆ ತಿಳಿದು ಬಂತು. ರೈತರಿಗೆ ಆಧ್ಯಾತ್ಮಿಕತೆಯ ಕೊರತೆಯಿದೆ ಎಂದು ಹೇಳಿದ ಅವರು ‘‘ಆಧ್ಯಾತ್ಮಿಕತೆಯ ಕ್ಷೇತ್ರದಲ್ಲಿರುವವರು ರೈತರನ್ನು ತಲುಪಲು ಯತ್ನಿಸಬೇಕು,’’ ಎಂದರು.

ರೈತರಲ್ಲಿ ಆತ್ಮಹತ್ಯೆ ಮನೋಭಾವವನ್ನು ಕಡಿಮೆಗೊಳಿಸಲು ಯೋಗ ಮತ್ತು ಪ್ರಾಣಾಯಾಮ ಅಭ್ಯಸಿಸಬೇಕು ಎಂದು ರವಿಶಂಕರ್ ಹೇಳಿದರು.

ತಮ್ಮ ಸಂಸ್ಥೆ ಆಯೋಜಿಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವದಿಂದಾಗಿ ಯಮುನಾ ತಟದಲ್ಲುಂಟಾದ ಹಾನಿಯ ಬಗ್ಗೆ ಪ್ರಶ್ನಿಸಿದಾಗ ‘‘ಸತ್ಯ ಜಯಿಸುವುದು’’ ಎಂದಷ್ಟೇ ಹೇಳಿದರು. ‘‘ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆಯಿದೆ. ಎನ್‌ಜಿಒವೊಂದು ಅಪಪ್ರಚಾರ ನಡೆಸುತ್ತಿದೆ. ಜನಪ್ರಿಯತೆಗೆ ಅದರದ್ದೇ ಆದ ಕೆಲವೊಂದು ಅನಾನುಕೂಲತೆಗಳಿವೆ’’ ಎಂದರು.

ತಮ್ಮ ಸಂಸ್ಥೆ ಯಮುನಾ ನದಿ ತೀರದಿಂದ 500 ಟನ್ ನಷ್ಟು ತ್ಯಾಜ್ಯ ಹೊರ ಹಾಕಿದೆ ಎಂದವರು ಹೇಳಿಕೊಂಡರು.

ಮಸೀದಿಗಳಲ್ಲಿ ಬಳಸಲಾಗುವ ಧ್ವನಿವರ್ಧಕಗಳ ಬಗ್ಗೆ ಹಿನ್ನೆಲೆ ಗಾಯಕ ಸೋನು ನಿಗಮ್ ಮಾಡಿದ ಟ್ವೀಟ್ ಬಗ್ಗೆ ಕೇಳಿದಾಗ ‘‘ಧಾರ್ಮಿಕ ಸ್ಥಳಗಳಿಗೆ ಧ್ವನಿವರ್ಧಕಗಳ ಅಗತ್ಯವಿಲ್ಲ. ಪ್ರಾರ್ಥನೆಗಳು ಹೃದಯದಿಂದ ಹೊರಹೊಮ್ಮಿ ನೇರವಾಗಿ ದೇವರಿಗೆ ಸೇರುತ್ತದೆ,’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News