ಬಾಹ್ಯಾಕಾಶದಲ್ಲಿ ವಿಶೇಷ ಪ್ರಯೋಗಕ್ಕೆ ಮುಂದಾದ ಇಸ್ರೋ

Update: 2017-05-02 07:16 GMT

ಬೆಂಗಳೂರು, ಮೇ 2: ಎರಡು ಗಗನ ನೌಕೆಗಳು ಬಾಹ್ಯಾಕಾಶದಲ್ಲೇ ಜೊತೆಗೂಡಲು ಹಾಗೂ ತಮ್ಮೊಳಗೆ ಅಗತ್ಯ ವಸ್ತುಗಳನ್ನು ಸಾಗಿಸಲು ಅನುವು ಮಾಡಿಕೊಡುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಇಸ್ರೋ ಯೋಚಿಸುತ್ತಿದೆ. ಈ ತಂತ್ರಜ್ಞಾನವನ್ನು ಸ್ಪೇಸ್ ಕ್ರಾಫ್ಟ್ ಡಾಕಿಂಗ್ ಆ್ಯಂಡ್ ಬರ್ತಿಂಗ್ ಎಂದು ಕರೆಯಲಾಗುತ್ತಿದೆ. ಈ ಯೋಜನೆ ಅನುಷ್ಠಾನಕ್ಕೆ ಬಾಹ್ಯಾಕಾಶ ಇಲಾಖೆ ಅನುಮತಿ ನೀಡಿದ್ದು 10 ಕೋಟಿ ರೂ. ಅನುದಾನ ನೀಡಿದೆ.

ಈ ತಂತ್ರಜ್ಞಾನ ಅಭಿವೃದ್ಧಿಗೊಂಡಾಗ ಇಸ್ರೋ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಅನುವು ಮಾಡಿ ಕೊಡಲಿದೆ. ಆದರೆ ಗಗನ ನೌಕೆಗಳಿಗೆ ಇಂಧನ ಮರು ಪೂರೈಸಲು ಹಾಗೂ ಈ ಮೂಲಕ ಅವುಗಳು ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಇರುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ತಂತ್ರಜ್ಞಾನ ಅಭಿವೃದ್ಧಿ ಕುರಿತು ಪ್ರಯೋಗಗಳು ಈಗಾಗಲೇ ಇಸ್ರೋ ಸ್ಪೇಸ್ ಅಪ್ಲಿಕೇಶನ್ ಸೆಂಟರ್, ಬೆಂಗಳೂರಿನಲ್ಲಿ ಆರಂಭಗೊಂಡಿದ್ದು ಕೆಲವೊಂದು ಗ್ರೌಂಡ್ ಸಿಮುಲೇಶನ್ಸ್ ಗಳನ್ನು ಪೂರ್ಣಗೊಳಿಸಲಾಗಿದೆ.

‘‘ಇಂತಹ ತಂತ್ರಜ್ಞಾನ ಉಪಯೋಗಿಸಿ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕರೆದೊಯ್ದು ಅಲ್ಲಿರುವವರನ್ನು ಹಿಂದಕ್ಕೆ ಕರೆತರಬಹುದು ಇಲ್ಲವೇ ಗಗನ ನೌಕೆಯ ಕೆಲವೊಂದು ಉಪಕರಣಗಳನ್ನು ಬದಲಾಯಿಸುವ ತಂತ್ರಜ್ಞರನ್ನೂ ಕಳುಹಿಸಬಹುದು,’’ ಎನ್ನುತ್ತಾರೆ ಇಸ್ರೋದ ಮಾಜಿ ಅಧ್ಯಕ್ಷ ಯು ಆರ್ ರಾವ್.

‘‘ಆದರೆ ಇದನ್ನು ಸಾಧಿಸಲು ಬಹಳಷ್ಟು ಸವಾಲುಗಳನ್ನು ಎದುರಿಸಬೇಕಿದೆ. ಎರಡು ಗಗನ ನೌಕೆಗಳು ಒಂದನ್ನೊಂದು ಪತ್ತೆ ಹಚ್ಚಲು ಮತ್ತು ಅದೇ ಕಕ್ಷೆಯಲ್ಲಿರುವಂತೆ ಮಾಡುವುದು ಸಾಹಸದ ಕೆಲಸ, ಮೇಲಾಗಿ ಹಲವಾರು ಕಾರ್ಯಗಳನ್ನು ರೋಬೋಟ್ ಗಳ ಮುಖಾಂತರವೇ ಸಾಧಿಸಬೇಕಿದೆ. ಅಷ್ಟೇ ಅಲ್ಲದೆ ಎರಡು ಗಗನ ನೌಕೆಗಳು ಒಂದರ ಹತ್ತಿರ ಇನ್ನೊಂದು ಬಂದಾಗ ಅವುಗಳ ವೇಗವನ್ನು ನಿಯಂತ್ರಿಸುವುದೂ ಅತಿ ಮುಖ್ಯ,’’ ಎಂದು ರಾವ್ ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News