×
Ad

ಬಿಜೆಪಿಯಲ್ಲಿ ಶೀಘ್ರ ಭಾರೀ ಬದಲಾವಣೆ

Update: 2017-05-02 14:38 IST

ಹೊಸದಿಲ್ಲಿ,ಮೇ2: ಪಕ್ಷದಲ್ಲಿ ಕೇಂದ್ರ ಮಟ್ಟದಲ್ಲಿ ಭಾರೀ ಬದಲಾವಣೆಗಳಿಗೆ ಬಿಜೆಪಿ ಸಜ್ಜಾಗುತ್ತಿದ್ದು, ಪಕ್ಷಾಧ್ಯಕ್ಷ ಅಮಿತ್ ಶಾ ಅವರು ಶೀಘ್ರವೇ ಈ ಪ್ರಕ್ರಿಯೆಯನ್ನು ಆರಂಭಿ ಸುವ ನಿರೀಕ್ಷೆಯಿದೆ ಎಂದು ಮೂಲಗಳು ಬಹಿರಂಗಗೊಳಿಸಿವೆ. ರಾಜ್ಯ ಘಟಕಗಳಲ್ಲಿನ ಬಣಗಳಿಂದ ನಾಯಕತ್ವ ಬದಲಾವಣೆಗಳಿಗೆ ಆಗ್ರಹವಿದೆಯಾದರೂ,ಪಕ್ಷದ ಕೇಂದ್ರ ನಾಯಕತ್ವವು ಸದ್ಯಕ್ಕೆ ಯಾವುದೇ ಮುಖ್ಯಮಂತ್ರಿಯನ್ನು ಬದಲಾಯಿಸುವ ಸಾಧ್ಯತೆಗಳು ಕಡಿಮೆ ಎಂದೂ ಅವು ತಿಳಿಸಿದವು.

ಕೇಂದ್ರ ಸಂಪುಟದ ಪುನರ್‌ರಚನೆಯ ಮಾತುಗಳು ಕೇಳಿಬರುತ್ತಿದ್ದು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರಕ್ಕೆ ವರ್ಗಾವಣೆ ಗೊಳ್ಳಬಹುದು ಎಎಂಬ ವದಂತಿ ದಟ್ಟವಾಗಿದೆ. ಆದರೆ ಇಂತಹ ಬದಲಾವಣೆಯನ್ನು ಸದ್ಯಕ್ಕಂತೂ ನಿರೀಕ್ಷಿಸಲಾಗಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿದವು.

 ಹರ್ಯಾಣ ಮತ್ತು ಗುಜರಾತ್‌ಗಳಲ್ಲಿಯೂ ಭಿನ್ನಮತೀಯ ಗುಂಪುಗಳು ತಮ್ಮ ರಾಜ್ಯ ನಾಯಕತ್ವಗಳಲ್ಲಿ ಬದಲಾವಣೆಯನ್ನು ನಿರೀಕ್ಷಿಸುತ್ತಿವೆ. ಆದರೆ ಮೂಲಗಳು ಹೇಳಿರುವಂತೆ ಈ ರಾಜ್ಯಗಳಲ್ಲಿಯೂ ನಾಯಕತ್ವ ಬದಲಾವಣೆಯ ಯಾವುದೇ ಯೋಜನೆಯನ್ನು ಕೇಂದ್ರ ನಾಯಕತ್ವವು ಹೊಂದಿಲ್ಲ. ‘‘ಚುನಾವಣೆಗಳು ಸನ್ನಿಹಿತವಾಗಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಬಿಜೆಪಿಯು ಸಾಮಾನ್ಯವಾಗಿ ಬದಲಾವಣೆ ಮಾಡುವುದಿಲ್ಲ. 2019ರ ಚುನಾವಣೆಗಳಿಗಾಗಿ ನಾವು ಸಿದ್ಧತೆಗಳನ್ನು ನಡೆಸುತ್ತಿದ್ದೇವೆ, ಹೀಗಾಗಿ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಅಥವಾ ಹರ್ಯಾಣಗಳ ಮುಖ್ಯಮಂತ್ರಿಗಳನ್ನು ಪಕ್ಷವು ಬದಲಾಯಿಸುವ ಸಾಧ್ಯತೆಗಳು ಕಂಡುಬರುತ್ತಿಲ್ಲ. ಇಂತಹ ಬದಲಾವಣೆಗಳು ಪಕ್ಷ ಮತ್ತು ಅದರ ಸರಕಾರಗಳ ಮೇಲೆ ಪರಿಣಾಮಗಳನ್ನು ಬೀರುತ್ತವೆ ಎಂದು ಬಿಜೆಪಿ ನಾಯಕರೋರ್ವರು ಹೇಳಿದರು.

ಆದರೆ ಪಕ್ಷದ ಸಂಘಟನೆಯಲ್ಲಿ ಭಾರೀ ಬದಲಾವಣೆಗಳಾಗಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಜೊತೆಗೆ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯಲ್ಲಿಯೂ ಬದಲಾವಣೆಗಳಾಗಬಹುದು. ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ಗಳಲ್ಲಿ ಪಕ್ಷವು ಸರಕಾರಗಳನ್ನು ರಚಿಸಿದ ಬಳಿಕ ಸಂಘಟನೆಯಲ್ಲಿ ಹುದ್ದೆಗಳು ತೆರವಾಗಿವೆ.

ಉತ್ತರ ಪ್ರದೇಶ ಸರಕಾರದಲ್ಲಿ ಸಚಿವರಾಗಿರುವ ಮಹೇಂದ್ರ ಸಿಂಗ್, ಶ್ರೀಕಾಂತ್ ಶರ್ಮಾ ಮತ್ತು ಸಿದ್ಧಾರ್ಥನಾಥ್ ಸಿಂಗ್ ಅವರು ಪಕ್ಷದ ಕಾರ್ಯದರ್ಶಿ ಹುದ್ದೆಗಳನ್ನು ತೆರವುಗೊಳಿಸಿದ್ದಾರೆ. ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ ಶರ್ಮಾ ಅವರು ಉಪಾಧ್ಯಕ್ಷ ಸ್ಥಾನಗಳನ್ನು ತೊರೆದಿದ್ದಾರೆ ಎಂದು ಅವು ಹೇಳಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News